ಸಾಮಾಜಿಕ ನ್ಯಾಯಕ್ಕಾಗಿ ಬಿಲ್ಲವ ಸಮಾವೇಶ: ಮುಖಂಡರ ಸಭೆಯಲ್ಲಿ ನಿರ್ಣಯ

ಮಂಗಳೂರು : ಬಿಲ್ಲವ, ಈಡಿಗ ಸೇರಿ 26 ಪಂಗಡಗಳ ಅಭಿವೃದ್ಧಿಗಾಗಿ ಹಾಗೂ ಈ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಸಮಾಜದ ಅಗ್ರಮಾನ್ಯ ನಾಯಕರಾದ ಬಿ.ಜನಾರ್ದನ ಪೂಜಾರಿಯವರ ಮುಂದಾಳತ್ವದಲ್ಲಿ 2023ರ ಫೆಬ್ರವರಿ ತಿಂಗಳಿನಲ್ಲಿ ನಗರದಲ್ಲಿ ಸಮಾವೇಶ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಲು ಬಿಲ್ಲವ ಸಂಘಟನೆಗಳು ನಿರ್ಧರಿಸಿವೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಬಿಲ್ಲವ ಸಂಘಟನೆಗಳ ಪ್ರಮುಖರು ಪಕ್ಷ ಭೇದವಿಲ್ಲದೆ ಒಗ್ಗಟ್ಟಿನ ಮೂಲಕ ಸಮಾಜದ ಶಕ್ತಿ ಪ್ರದರ್ಶನ ನಡೆಸುವ ಬಗ್ಗೆ ಒಕ್ಕೊರಲ ನಿರ್ಣಯ ಕೈಗೊಂಡರು.
ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪಿಸಿ ಅದರಡಿ ಬಿಲ್ಲವರಿಗೆ ವಿಶೇಷ ಸವಲತ್ತು ಕಲ್ಪಿಸ ಬೇಕು ಹಾಗೂ ಬಿಲ್ಲವರನ್ನು ಪ್ರವರ್ಗ 1ಕ್ಕೆ ಸೇರಿಸಬೇಕು ಎಂಬ ನಿರ್ಣಯಗಳನ್ನು ಈ ಹಿಂದೆ ಬ್ರಹ್ಮಾವರದಲ್ಲಿ ನಡೆದಿದ್ದ ಬಿಲ್ಲವರ ಸಮಾವೇಶದಲ್ಲಿ ಕೈಗೊಳ್ಳಲಾಗಿತ್ತು. ಈ ಬೇಡಿಕೆಗಳನ್ನು ಸರ್ಕಾರ ಇನ್ನೂ ಈಡೇರಿಸದ ಬಗ್ಗೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್ ಮಾತನಾಡಿ, ಬಿಲ್ಲವ ಸಮಾಜವನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ಆದರೆ ಸಮುದಾಯದವರಿಗೆ ಸವಲತ್ತು ಸಿಗುತ್ತಿದೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಬಿಲ್ಲವರನ್ನು ಪ್ರವರ್ಗ ೨ಎ ಅಡಿ ಸೇರಿಸಲಾಗಿದೆ. 100ಕ್ಕೂ ಅಧಿಕ ಜಾತಿಗಳು ಈ ಪ್ರವರ್ಗದಲ್ಲಿವೆ. ಈಗ ರಾಜ್ಯದ ಕೆಲವು ಪ್ರಬಲ ಜಾತಿಯವರು ತಮ್ಮನ್ನೂ ಪ್ರವರ್ಗ 2ಎ ಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಇದರಿಂದ ಬಿಲ್ಲವರು ಮತ್ತಷ್ಟು ಸವಲತ್ತು ವಂಚಿತರಾಗಬೇಕಾದ ಸ್ಥಿತಿ ನಿರ್ಮಾಣವಾಗ ಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಮಾತನಾಡಿ, ಉಭಯ ಜಿಲ್ಲೆಗಳಲ್ಲಿ ಬಿಲ್ಲವ ಸಮಾಜ ಬಹುಸಂಖ್ಯಾತರಾಗಿದ್ದರೂ ರಾಜಕೀಯ ಪಕ್ಷಗಳು ಸ್ಪರ್ಧಿಸುವ ಅವಕಾಶನ್ನೇ ನೀಡುತ್ತಿಲ್ಲ. ೮ ವಿಧಾನಸಭಾ ಸ್ಥಾನ ಇರುವ ಜಿಲ್ಲೆಗಳಲ್ಲಿ ಕೇವಲ 1 ಸ್ಥಾನ ಮಾತ್ರ ಬಹುಸಂಖ್ಯಾತ ಬಿಲ್ಲವರಿಗೆ ನೀಡಿ ವಂಚಿಸಲಾಗುತ್ತಿದೆ. ನಾವು ಸಂಘಟಿತರಾಗಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.
ಸರ್ಕಾರಗಳು ನಮ್ಮ ಸಮಾಜದ ಅಭಿವೃದ್ಧಿ ಮನವಿಗೆ ಸ್ಪಂದಿಸುತ್ತಿಲ್ಲ. ನಮ್ಮ ಹಕ್ಕುಗಳನ್ನು ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಸಮಾಜದಲ್ಲಿ ಜಾಗೃತಿ ಉಂಟುಮಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಮನವಿ ಮಾಡಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಶ್ರೀಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷ ಪೀತಾಂಬರ ಹೆರಾಜೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಉಡುಪಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಬಿಲ್ಲವ ಪರಿಷತ್ ಅಧ್ಯಕ್ಷ ನವೀನ್ ಅಮೀನ್, ಪ್ರಮುಖರಾದ ಜಯಂತ ನಡುಬೈಲ್, ಅಚ್ಚುತ್ತ ಕಲ್ಮಾಡಿ, ಲೀಲಾಕ್ಷ ಕರ್ಕೇರ, ಜಗನ್ನಾಥ ಕೋಟೆ, ಅನಿಲ್ ಕುಮಾರ್, ಬೇಬಿ ಕುಂದರ್, ಪಿ.ಎ.ಪೂಜಾರಿ, ಸದಾನಂದ ಪೂಜಾರಿ, ಎಂ.ಎಸ್. ಕೋಟ್ಯಾನ್, ಚಿದಾನಂದ ಎಲ್ದಕ್ಕ, ಎಲ್ದಪ್ಪ ಪೂಜಾರಿ, ಜಯವಿಕ್ರಮ್, ಡಾ.ಅನುಸೂಯ, ಸುಖಲಾಕ್ಷಿ ಸುವರ್ಣ, ಮಾಜಿ ಮೇಯರ್ ವಿಜಯ ಅರುಣಾ, ಶ್ರೀಲತಾ ಹಾಗೂ ಉಭಯ ಜಿಲ್ಲೆಗಳ ಬಿಲ್ಲವ ಸಂಘಗಳು ಮತ್ತು ಯುವ ಸಂಘಟನೆಗಳ 500ಕ್ಕೂ ಮಿಕ್ಕಿ ಬಿಲ್ಲವ ಪ್ರತಿನಿಧಿಗಳು ಭಾಗವಹಿಸಿದ್ದರು.







