ಪಿಎಂ- ಕಿಸಾನ್ ಸಮ್ಮೇಳನ- 2022 ಅಂಗವಾಗಿ ರೈತರ ಕಾರ್ಯಕ್ರಮ
ಮಂಗಳೂರು, ಅ.17: ದಿಲ್ಲಿಯಲ್ಲಿ ಸೋಮವಾರ ಆಯೋಜಿಸಿದ್ದ ಪಿಎಂ- ಕಿಸಾನ್ ಸಮ್ಮೇಳನ- 2022 ಅಂಗವಾಗಿ ಮಂಗಳೂರು ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ರೈತರ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ 1,55,542 ಮಂದಿ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಒಟ್ಟು 405 ಕೋಟಿ ರೂ. ಖಾತೆಗೆ ನೇರ ಪಾವತಿ ಮಾಡಲಾಗಿದೆ ಎಂದರು.
ಕೇಂದ್ರ ಸರಕಾರವು ವಾರ್ಷಿಕ ಆರು ಸಾವಿರ ರೂ. ಮೂಲಧನ ನೀಡುತ್ತಿದ್ದರೆ, ರಾಜ್ಯ ಸರಕಾರದ ನಾಲ್ಕು ಸಾವಿರ ರೂ. ಸೇರಿಸಿ ಒಟ್ಟು 10 ಸಾವಿರ ರೂ. ಖಾತೆಗೆ ವರ್ಗಾಯಿಸಲಾಗುತ್ತಿದೆ. ಕೇಂದ್ರ ಸರಕಾರದ 277.118 ಕೋಟಿ ರೂ. ಮತ್ತು ರಾಜ್ಯ ಸರಕಾರ 128.286 ಕೋಟಿ ರೂ. ಈಗಾಗಲೇ ವರ್ಗಾವಣೆ ಮಾಡಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ರೈತರು ಸ್ವಾಭಿಮಾನಿಗಳು ಮತ್ತು ಸ್ವಾವಲಂಬಿಗಳು. ಕೃಷಿಯಲ್ಲಿ ಹಲವು ಪ್ರಯೋಗ ಮಾಡುತ್ತಿರುವುದುರಿಂದ ಯಾವೊಬ್ಬ ರೈತರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು ಭತ್ತ ಬೆಳೆಸಲಾಗುತ್ತಿತ್ತು. ಎರಡು ವರ್ಷಗಳಿಂದ ಬಂಟ್ವಾಳ, ಪುತ್ತೂರು ತಾಲೂಕಿನಲ್ಲೂ ಭತ್ತದ ಕೃಷಿ ಅಧಿಕಗೊಂಡಿದೆ. ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದೆ ಬಿಪಿಎಲ್ ಕಾರ್ಡ್‌ದಾರರಿಗೆ ಐದು ಕೆಜಿ ಕುಚ್ಚಲಕ್ಕಿ ನೀಡಲಿದ್ದು, ಇದರಿಂದ ಕುಚ್ಚಲಕ್ಕಿ ಬೆಳೆಸಲು ಬೇಡಿಕೆ ಬರಲಿದೆ ಎಂದು ನಳಿನ್ ಹೇಳಿದರು.
ಶಾಸಕ ಡಿ.ವೇದವ್ಯಾಸ ಕಾಮತ್, ಉಪಮೇಯರ್ ಪೂರ್ಣಿಮಾ, ಕಾರ್ಪೊರೇಟರ್ ಭರತ್ ಕುಮಾರ್ ಎಸ್., ಕೃಷಿಕರಾದ ದಯಾನಂದ ಕುಲಾಲ್ ದೇಲಂತಬೆಟ್ಟು, ಜಾಸ್ಮಿನ್ ಅರಾಹ್ನ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಸೀತಾ ಎಂ.ಸಿ. ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯಲ್ಲಿ ಮಾಡಿದ ಭಾಷಣದ ನೇರ ಪ್ರಸಾರವನ್ನು ಸಂಸದರು, ಶಾಸಕರು, ಅಧಿಕಾರಿಗಳು, ವಿದ್ಯಾರ್ಥಿಗಳು ವೀಕ್ಷಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೃಷಿಕ ಭವಾನಿಶಂಕರ್ ಪ್ರಧಾನಿಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ.ರಮೇಶ್ ಸ್ವಾಗತಿಸಿದರು. ವಾದಿರಾಜ ಕಾರ್ಯಕ್ರಮ ನಿರೂಪಿಸಿದರು.