ಮಂಡ್ಯ | ಮಳೆ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರಕ್ಕೆ ಆಗ್ರಹ; ಡಿಸಿ ಕಚೇರಿ ಆವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು
ಮಂಡ್ಯ, ಅ.17: ಮಳೆಯಿಂದ ಜಲಾವೃತಗೊಂಡಿರುವ ನಗರದ ಬೀಡಿ ಕಾರ್ಮಿಕರ ಕಾಲನಿಯ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಕಟ್ಟಡದೊಳಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ವರದಿಯಾಗಿದೆ.
ಮುಚ್ಚಿದ್ದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮುಖ್ಯದ್ವಾರವನ್ನು ಪೊಲೀಸರ ತಡೆಯನ್ನು ಲೆಕ್ಕಿಸದೇ ತೆರೆದ ನೂರಾರು ಮಂದಿ, ಒಳಗಡೆ ನುಗ್ಗಿ ಒಳಾವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಕೆಲಸಮಯ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು ಎಂದು ಹೇಳಲಾಗಿದೆ.
ಕಟ್ಟಡದ ಆವರಣದೊಳಗೆ ಪ್ರವೇಶಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ, ಸರಕಾರ, ಶಾಸಕರ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಕಚೇರಿಯಿಂದ ಹೊರಬಂದ ಜಿಲ್ಲಾಧಿಕಾರಿ ಅಶ್ವತಿ ಅವರು, ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಎಂದಿನಂತೆ ಭರವಸೆ ನೀಡಿದರು.
'ಕೆರೆಯಂಗಳದ ಬಡಾವಣೆಯಲ್ಲಿ ನಮಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೀರಿ, ಸುಮಾರು ಎರಡು ಸಾವಿರ ಕುಟಂಬಗಳು ಅಲ್ಲಿವೆ. ಆದರೆ, ಯಾವುದೇ ಮೂಲಸೌಕರ್ಯ ಒದಗಿಸಿಲ್ಲ. ಮಿಗಿಲಾಗಿ ಮಳೆ ಬಂದಾಗ ಬಡಾವಣೆ ಕೆರೆಯಂತಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಿಲ್ಲ' ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದರು.
'ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವರ ನಾಮಕಾವಸ್ತೆಗೆ ಭೇಟಿ ಹೋದರು. ಮುಖ್ಯಮಂತ್ರಿಗಳು ಶಾಶ್ವತ ಪರಿಹಾರ ಕಲ್ಪಿಸಲು ಕ್ರಮವಹಿಸಿ ಹಣ ಬಿಡುಗಡೆಯಾಗಿದೆ ಎಂದರು. ಪ್ರತಿ ಬಾರಿಯೂ ಇದನ್ನು ಹೇಳುತ್ತಿದಾರೆ. ಕ್ರಮ ಮಾತ್ರ ಕೈಗೊಂಡಿಲ್ಲ' ಎಂದು ಅವರು ಡಿಸಿ ಅವರನ್ನು ತರಾಟೆಗೆ ತೆಗೆದುಕೊಂಡರು.