ರಾಜ್ಯ ಸರ್ಕಾರ ಗುಂಡಿ ಮುಚ್ಚೋದು ಬಿಟ್ಟು ವಸೂಲಿಗೆ ನಿಂತಿದೆ: ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು, ಅ. 17: ‘ಇಡೀ ರಾಜ್ಯದಲ್ಲಿನ ಎಲ್ಲ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಬೆಂಗಳೂರು ನಗರದಲ್ಲಿ ರಸ್ತೆ ಕಾರಣಕ್ಕೆ ಮಹಿಳೆಯೊಬ್ಬರು ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಗುಂಡಿ ಬಿದ್ದ ರಸ್ತೆಗಳು ರಾಜ್ಯದ ಗೌರವವನ್ನು ಮೂರಾಬಟ್ಟೆ ಮಾಡುತ್ತಿವೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು, ಇಂತಹ ಕಾನ್ಫರೆನ್ಸ್ ಗಳು ಎಷ್ಟೋ ಆಗಿವೆ. ಆದರೆ, ಗುಂಡಿಗಳು ಮಾತ್ರ ಮುಚ್ಚಿಲ್ಲ, ಎಲ್ಲವೂ ಹಾಗೆಯೇ ಇವೆ. ಜನರ ಜೀವಗಳನ್ನು ಕಾಪಾಡುವ ಕೆಲಸವನ್ನು ಈ ಸರಕಾರ ಮಾಡುತ್ತಿಲ್ಲ ಎಂದು ದೂರಿದರು.
‘ಮಳೆ ಬಂದಿರುವುದು ನಿಜ. ಕರ್ನಾಟಕದಲ್ಲಿ ಮಾತ್ರ ಮಳೆ ಆಗಿಲ್ಲ. ಮಳೆಗೆ ಅಗತ್ಯವಾದ ತಯಾರಿ ಈ ಸರಕಾರ ಮಾಡಿಕೊಂಡಿಲ್ಲ. ಒರಿಸ್ಸಾ ಸೇರಿದಂತೆ ಅನೇಕ ಕಡೆ ಪ್ರತಿವರ್ಷ ಮಳೆ ಬಂದರೂ ಅಲ್ಲೆಲ್ಲಾ ಏನೂ ಅಪಾಯ ಆಗಿಲ್ಲ. ತಕ್ಷಣವೇ ಎಲ್ಲವನ್ನೂ ಅಲ್ಲಿನ ಸರಕಾರದವರು ಸರಿ ಮಾಡುತ್ತಾರೆ. ಆದರೆ, ನಮ್ಮಲ್ಲಿ ಅಂತಹ ಕೆಲಸ ಆಗುತ್ತಿಲ್ಲ. ಗುಂಡಿ ಮುಚ್ಚುವ ಕೆಲಸ ಮಾತ್ರ ಆಗ್ತಿಲ್ಲ, ಬದಲಿಗೆ ಗುಂಡಿಗಳ ಹೆಸರಲ್ಲಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ'ಎಂದು ಅವರು ಟೀಕಿಸಿದರು.
‘ಅರಸೀಕೆರೆ ಸಮೀಪ ರಸ್ತೆ ಅಪಘಾತ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಅಗತ್ಯವಾದರೆ ಸರಕಾರ ರಾಜ್ಯದಲ್ಲಿ ಒಂದು ಸಮೀಕ್ಷೆ ಮಾಡಿಸಲಿ. ಅದನ್ನು ಮಾಡುವ ಬದಲು ಈ ಸರಕಾರ ವಸೂಲಿ ಮಾಡುವುದಕ್ಕೆ ನಿಂತಿದೆ. ರಸ್ತೆಗಳಲ್ಲಿ, ಹೆದ್ದಾರಿ ರಸ್ತೆಯಲ್ಲಿ ಎಎಸ್‍ಐ ಸೇರಿ ನಾಲ್ಕೈದು ಮಂದಿ ಪೊಲೀಸರು ನಿಂತು ವಾಹನಗಳನ್ನು ನಿಲ್ಲಿಸಿ ವಸೂಲಿ ಗೆ ನಿಂತಿರುತ್ತಾರೆ. ಬೆಳಗ್ಗೆ ವಸೂಲಿ ಮಾಡಿ ರಾತ್ರಿ ಎಲ್ಲರೂ ಹಂಚಿಕೊಳ್ಳುತ್ತಾರೆ. ವಸೂಲಿ ಮಾಡುವುದಕ್ಕೆ ಈ ಸರಕಾರ ನಿಂತಿದೆ' ಎಂದು ಕುಮಾರಸ್ವಾಮಿ ಆರೋಪ ಮಾಡಿದರು.
‘ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಪ್ರಾರಂಭವಾಗಿ ಸೋಮವಾರ ಬೆಳಗ್ಗೆವರೆಗೆ ವ್ಯಾಪಾರ, ವಹಿವಾಟು, ಬಾರ್ ಪಬ್ಬಿಗೆ ಎಲ್ಲದ್ದಕ್ಕೂ ಸರಕಾರವೇ ಅವಕಾಶ ಕೊಟ್ಟಿದೆ. ರಾತ್ರಿ ವೇಳೆ ಕುಡಿಯೋದಕ್ಕೆ ಅವಕಾಶ ಕೊಡೋದು ಸರಕಾರವೆ. ಹೋಟೆಲ್‍ಗೆ ರಾತ್ರಿ ವೇಳೆ ಅನುಮತಿ ಕೋಡೋದು ಸರಕಾರವೇ. ಕುಡಿದ ಮೇಲೆ ಮತ್ತೆ ಹಣ ವಸೂಲಿ ಮಾಡುವುದು ಸರಕಾರವೇ?' ಎಂದು ಅವರು ಕಿಡಿಕಾರಿದರು.
‘ಕೆ.ಆರ್.ಪೇಟೆ ತಾಲೂಕಿನಲ್ಲಿ ಕುಂಭಮೇಳ ನಡೆಯುತ್ತಿದೆ. ಇನ್ನು ಆ ಕಾರ್ಯಕ್ರಮ ಮುಗಿದೆ ಇಲ್ಲ. ಆದರೆ, ಅಲ್ಲಿನ ರಸ್ತೆಗೆ ಹಾಕಿದ್ದ ಡಾಂಬಾರು ಆಗಲೇ ಕಿತ್ತು ಹೋಗಿದೆ ಎಂದು ನನಗೆ ಮಾಹಿತಿ ಬಂದಿದೆ. ಸ್ವಾಮೀಜಿಗಳು ಎಲ್ಲರೂ ಅಲ್ಲೇ ಇದ್ದರು. ಡಾಂಬಾರು ಹಾಕಿರುವುದರಲ್ಲಿ ಶೇ.40ರಷ್ಟು ಕಮೀಷನ್ ವ್ಯವಹಾರ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಈ ಸರಕಾರದ ಹಣೆಬರಹ' ಎಂದು ಅವರು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪರ: ‘ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ಟಿಕೆಟ್‍ಗಾಗಿ ಪೈಪೋಟಿ ಇದೆ. ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಹೀಗಾಗಿ ಆಕಾಂಕ್ಷಿಗಳನ್ನು ಕರೆದು ಮಾತನಾಡುತ್ತಿದ್ದೇವೆ. ಕ್ಷೇತ್ರಗಳಲ್ಲಿ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇವೆ. ಕ್ಷೇತ್ರವಾರು ಆಕಾಂಕ್ಷಿಗಳನ್ನು, ಮುಖಂಡರನ್ನು ಕರೆದು ಚರ್ಚೆ ಮಾಡುತ್ತಿದ್ದೇವೆ. ಎಲ್ಲ ಕಡೆ ಜನರ ಒಲವು ನಮ್ಮ ಪಕ್ಷದ ಕಡೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಕಾರ್ಯಾಗಾರ: ‘ಮೈಸೂರಿನಲ್ಲಿ ಅ.19 ಮತ್ತು 20ರಂದು ಪಕ್ಷದ 126 ಅಭ್ಯರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಕಾರ್ಯಾಗಾರದಲ್ಲಿ ಬಿಡದಿಯಲ್ಲಿ ನಡೆದ ಜನತಾ ಪರ್ವ ಕಾರ್ಯಾಗಾರದಲ್ಲಿ ಕೊಟ್ಟ ಟಾಸ್ಕ್‍ಗಳನ್ನು ಪೂರ್ಣ ಮಾಡಿದ್ದಾರಾ? ಇಲ್ಲವಾ? ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಚುನಾವಣೆಗೆ ಹೇಗೆ ಕೆಲಸ ಮಾಡಬೇಕು ಅಂತ ಸೂಚನೆ ಕೊಡುತ್ತೇವೆ' ಎಂದು ಅವರು ನುಡಿದರು.
‘ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನವೆಂಬರ್ 1ರಿಂದ ಪ್ರಾರಂಭ ಆಗುತ್ತದೆ. 2-3 ಹಂತದಲ್ಲಿ ರಥಯಾತ್ರೆ ಇರುತ್ತದೆ. ನವೆಂಬರ್ 1ರಿಂದ ಫೆಬ್ರವರಿ ಅಂತ್ಯದವರೆಗೂ ನಿರಂತರವಾಗಿ ಪಂಚರತ್ನ ರಥಯಾತ್ರೆ ನಡೆಯುತ್ತದೆ ಎಂದು ಅವರು ತಿಳಿಸಿದರು.
‘ಯಾರೋ ಮಾಡುವ ಸರ್ವೆ ರಿಪೋರ್ಟ್ ನನಗೆ ಮುಖ್ಯ ಅಲ್ಲ. ನನ್ನ ಗುರಿ 123 ಅದಕ್ಕೆ ನಾವು ಕೆಲಸ ಮಾಡುತ್ತೇವೆ. ನಾವು ಸರ್ವೆ ಮಾಡಿಸುತ್ತಿದ್ದೇವೆ. 30-40 ಕ್ಷೇತ್ರ ಸರ್ವೆ ಆಗಿದೆ. ಅಲ್ಲಿ ಕೆಲ ಗೊಂದಲ ಸರಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಸರ್ವೆ ರಿಪೋರ್ಟ್ ನಮ್ಮ ಪರ ಇದೆ ಅಂತ ಮೈಮರೆಯೋದು ಬೇಡ. ಸರ್ವೆ ನೆಗೆಟಿವ್ ಇರಲಿ ಪಾಸಿಟಿವ್ ಇರಲಿ. ನಾವು ಚುನಾವಣೆ ಗೆಲ್ಲುವುದಕ್ಕೆ ಕೆಲಸ ಮಾಡುತ್ತೇವೆ' ಎಂದು ಹೇಳಿದರು.