ಹೋರಾಟ ಮಾಡಿ ಕಾನೂನು ಕೈಗೆತ್ತಿಕೊಂಡರೆ ಕ್ರಮ: ಸಂಸದ ನಳಿನ್ ಕುಮಾರ್ ಕಟೀಲ್
ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ

ನಳಿನ್ ಕುಮಾರ್ ಕಟೀಲ್
ಮಂಗಳೂರು, ಅ.17: ಸುರತ್ಕಲ್ ಟೋಲ್ ತೆರವು ಹೋರಾಟಗಾರರಿಗೆ ಕೇವಲ 20 ದಿನದ ಕಾಲಾವಕಾಶ ಕೋರುತ್ತಿದ್ದೇವೆ. ಅದನ್ನು ಮೀರಿ ಹೋರಾಟ ಮಾಡಿ ಕಾನೂನು ಕೈಗೆತ್ತಿಕೊಂಡರೆ ಸರಕಾರ ತನ್ನದೇ ಕ್ರಮ ಕೈಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಟೋಲ್ ತೆರವಿಗೆ ನಾವು ಬದ್ಧರಾಗಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಬೇಡಿ ಎನ್ನಲಾಗದು. ಶಾಂತಿಯುವ ಹೋರಾಟಕ್ಕೆ ನಮ್ಮ ವಿರೋಧವಿಲ್ಲ. ನಾಳೆ ಕಾನೂನು ಕೈಗೆತ್ತಿಕೊಂಡರೆ ಸರಕಾರ ತನ್ನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸಂಸದನಾಗಿ ನಾನು ಮತ್ತು ಬಿಜೆಪಿ ಕೂಡಾ ಟೋಲ್ ತೆಗೆಯಲೇಬೇಕು ಎನ್ನುತ್ತಿದೇವೆ. ಹೋರಾಟಗಾರರನ್ನು ವಿನಂತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು 20 ದಿನಗಳ ಕಾಲಾವಕಾಶ ಕೋರಿದ್ದಾರೆ. ಈಗಾಗಲೇ ವಿಳಂಬ ಮಾಡಿ ನಮ್ಮಿಂದ ತಪ್ಪಾಗಿದೆ. ಇನಷ್ಟು ದಿನ ಕಾಯಿರಿ. 20 ದಿನದಲ್ಲಿ ತೆಗೆಯದಿದ್ದರೆ, ನಾನೇ ಕಾನೂನು ಹೋರಾಟ ಮಾಡುತ್ತೇನೆ. ಕೇಂದ್ರ ಸಚಿವರಿಗೂ ತಿಳಿಸಿದ್ದೇನೆ ಎಂದು ನಳಿನ್ ಹೇಳಿದರು.
ಇವತ್ತು ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕಾಗಿ ಹೂಡಿಕೆ ಮಾಡಿದ ಬ್ಯಾಂಕ್ನವರು ಬಂದಿದ್ದಾರೆ. ಸರ್ವೇ ಮಾಡಿದ ಬಳಿಕ ಒಪ್ಪಂದ ನಡೆಯಲಿದೆ. ಈ ಪ್ರಕ್ರಿಯೆ ಮುಗಿಸಲು ಕೆಲವು ದಿನ ಬೇಕಾಗುತ್ತದೆ. ಅಷ್ಟು ದಿನ ಕಾಯಲೇಬೇಕು. ಕೇವಲ ಹೋರಾಟಗಾರರು ಇದ್ದಿದ್ದರೆ ಸಮಸ್ಯೆ ಇರಲಿಲ್ಲ. ಕೆಲವು ರಾಜಕೀಯ ಶಕ್ತಿಗಳು ನುಸುಳಿಕೊಂಡಿದ್ದು, ಅವರ ಪ್ರಶ್ನೆಗಳಿಗೆ ನಮ್ಮಲ್ಲೂ ಪ್ರಶ್ನೆಗಳಿವೆ ಎಂದು ಅವರು ಹೇಳಿದರು.





