ಭಾರತೀಯ ಮೂಲದ ಬ್ರಿಟಿಷ್ ಲೇಖಕಿ ಪ್ರೀತಿ ತನೇಜಾ ಅವರ 'ಆಫ್ಟರ್ಮಾಥ್' ಕೃತಿಗೆ 'ಗೋರ್ಡನ್ ಬರ್ನ್' ಪ್ರಶಸ್ತಿ

ಪ್ರೀತಿ ತನೇಜಾ (Photo: scroll.in)
ಹೊಸದಿಲ್ಲಿ: ಭಾರತೀಯ ಮೂಲದ ಬ್ರಿಟಿಷ್ ಲೇಖಕಿ ಪ್ರೀತಿ ತನೇಜಾ (Preti Taneja) ಅವರು ವಾರ್ಷಿಕ 'ಗೋರ್ಡೊನ್ ಬರ್ನ್' ಪ್ರಶಸ್ತಿ (Gordon Burn Prize) ಅನ್ನು ತಮ್ಮ ಕೃತಿ 'ಆಫ್ಟರ್ಮಾಥ್' ಗೆ ಪಡೆದುಕೊಂಡಿದ್ದಾರೆ. ಇವರು ಈ ಪ್ರತಿಷ್ಠಿತ ಪ್ರಶಸ್ತಿಯ ಹತ್ತನೇ ವಿಜೇತರಾಗಿದ್ದಾರೆ.
ದಿಟ್ಟ ಮತ್ತು ಪ್ರಗತಿಪರ ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ ಇಂಗ್ಲಿಷ್ ಕೃತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಅಕ್ಟೋಬರ್ 13 ರಂದು ಡುರ್ಹಾಮ್ ಪುಸ್ತಕೋತ್ಸವದಲ್ಲಿ ಪ್ರಶಸ್ತಿ ವಿಜೇತರನ್ನು ಘೋಷಿಸಲಾಯಿತು. ಕ್ರೀಡಾ ಲೇಖಕ, ಅಂಕಣಕಾರ ಜೊನಾಥನ್ ಲೀವ್, ಲೇಖಕಿ ಡೆನಿಸ್ ಮಿನಾ, ಸ್ಟುವಾರ್ಟ್ ಮೆಕೋನಿ, ಕವಿ ಹೀತ್ ಫಿಲಿಪ್ಸನ್ ಮತ್ತು ಲೇಖಕಿ ಚಿತ್ರಾ ರಾಮಸ್ವಾಮಿ ತೀರ್ಪುಗಾರರ ಸಮಿತಿಯಲ್ಲಿದ್ದರು.
2019ರ ಲಂಡನ್ ಬ್ರಿಡ್ಜ್ ಉಗ್ರ ದಾಳಿಯ ನಂತರ ಉಂಟಾದ ಆಘಾತ, ನೋವು ಮುಂತಾದ ವಿಚಾರಗಳತ್ತು ತನೇಜಾ ಅವರ ಪ್ರಶಸ್ತಿ ವಿಜೇತ ಕೃತಿ ಬೆಳಕು ಚೆಲ್ಲಿದೆ.
ಈ ದಾಳಿ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ಉಸ್ಮಾನ್ ಖಾನ್ ಎಂಬಾತ ಎಂಟು ವರ್ಷ ಅದಾಗಲೇ ಜೈಲಿನಲ್ಲಿ ಕಳೆದಿದ್ದವನಾಗಿದ್ದ ಹಾಗೂ 2018 ರಲ್ಲಿ ಬಿಡುಗಡೆಗೊಂಡಿದ್ದ. ಆತನಿದ್ದ ಬಂದೀಖಾನೆಯ ಕಾರ್ಯಕ್ರಮವೊಂದರ ವಾರ್ಷಿಕೋತ್ಸವದ ವೇಳೆ ಆತ ಲಂಡನ್ ಬ್ರಿಡ್ಜ್ ಸಮೀಪ ಸಸ್ಕಿಯಾ ಜೋನ್ಸ್ ಮತ್ತು ಜಾಕ್ ಮೆರಿಟ್ಟ್ ಎಂಬಿಬ್ಬರನ್ನು ಸಾಯಿಸಿದ್ದ. ಆತನಿಗೆ ಜೈಲಿನಲ್ಲಿ ತನೇಜಾ ಶಿಕ್ಷಣ ನೀಡುತ್ತಿದ್ದರು ಹಾಗೂ ಜಾಕ್ ಆಕೆಯ ಸಹೋದ್ಯೋಗಿಯಾಗಿದ್ದರು.
ಹಿಂಸೆಯ ನಂತರ ವಿಶ್ವಾಸವನ್ನು ಮರುಸಂಪಾದಿಸಲು ಹಾಗೂ ಸಾಮಾಜಿಕ ಹೋರಾಟ ಮತ್ತು ನಿರೀಕ್ಷೆಯೊಂದಿಗೆ ಅನುಕಂಪದ ಮೇಲೆ ನಂಬಿಕೆಯನ್ನು ಮರುಸ್ಥಾಪಿಸುವ ಒಂದು ಯತ್ನದ ಭಾಗವಾಗಿ ಆಫ್ಟರ್ಮಾಥ್ ಎಂಬ ಕೃತಿಯನ್ನು ತನೇಜಾ ಬರೆದಿದ್ದಾರೆ.
ತನೇಜಾ ಅವರ ಮೊದಲ ಕಾದಂಬರಿ 'ವಿ ದ್ಯಾಟ್ ಆರ್ ಯಂಗ್' ಆಗಿತ್ತು.
ಇದನ್ನೂ ಓದಿ: ದೀಪಾವಳಿ ಉಡುಗೊರೆಯಾಗಿ ಉದ್ಯೋಗಿಗಳಿಗೆ ಕಾರು, ಬೈಕ್ ನೀಡಿದ ಚಿನ್ನಾಭರಣ ಮಳಿಗೆ ಮಾಲಕ







