ಸಾರಿಗೆ ನಷ್ಟವನ್ನು ತಪ್ಪಿಸಲು ನಾಲ್ಕೂ ನಿಗಮಗಳ ವಿಲೀನಕ್ಕೆ ಸಜ್ಜು: ಸಚಿವ ಬಿ.ಶ್ರೀರಾಮುಲು
ಬೆಂಗಳೂರು,ಅ. 17: ‘ರಾಜ್ಯ ಸಾರಿಗೆ ಸಂಸ್ಥೆಗೆ ಹೊಸದಾಗಿ 4ಸಾವಿರ ಬಸ್ಸುಗಳನ್ನು ಖರೀದಿಸಲು ಸರಕಾರ ತೀರ್ಮಾನಿಸಿದ್ದು, ಹಂತ-ಹಂತವಾಗಿ ಬಸ್‍ಗಳನ್ನು ಖರೀದಿಸಲಾಗುವುದು. ಅಲ್ಲದೆ, ಸಂಸ್ಥೆಯನ್ನು ನಷ್ಟದ ಸುಳಿಯಿಂದ ಹೊರ ತರುವ ನಿಟ್ಟಿನಲ್ಲಿ ನಾಲ್ಕೂ ನಿಗಮಗಳ ವಿಲೀನಗೊಳಿಸಲು ಚಿಂತನೆ ನಡೆಸಿದೆ' ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಇಂದಿಲ್ಲಿ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಹುದಿನಗಳಿಂದ ಸಾರಿಗೆ ಸಂಸ್ಥೆಗಳು ಅನುಭವಿಸುತ್ತಿರುವ ನಷ್ಟವನ್ನು ತಪ್ಪಿಸಲು ನಾಲ್ಕೂ ಸಾರಿಗೆ ನಿಗಮಗಳ ವಿಲೀನಕ್ಕೆ ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ನಾಲ್ಕು ನಿಗಮಗಳು ಅಸ್ತಿತ್ವದಲ್ಲಿರುವುದರಿಂದ ಆಡಳಿತಾತ್ಮಕ ಹೊರೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ನಿಗಮಗಳನ್ನು ವಿಲೀನಗೊಳಿಸಿ ಒಂದೇ ನಿಗಮ ಅಸ್ತಿತ್ವದಲ್ಲಿರುವಂತೆ ಮಾಡಿದರೆ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟ ತಪ್ಪುತ್ತದೆ' ಎಂದು ಭರವಸೆ ವ್ಯಕ್ತಪಡಿಸಿದರು.
‘ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ 4 ಪ್ರತ್ಯೇಕ ಸಾರಿಗೆ ನಿಗಮಗಳಿರುವುದರಿಂದ ಎಲ್ಲ ನಿಗಮಗಳು ತಮ್ಮ ತಮ್ಮ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳುತ್ತವೆ.ಹೀಗಾಗಿ ಬಹುತೇಕ ವೇಳೆ ಬಸ್ಸುಗಳು ಕಡಿಮೆ ಪ್ರಯಾಣಿಕರೊಂದಿಗೆ ಸಂಚರಿಸುವಂತೆ ಆಗಿ ನಷ್ಟದ ಪ್ರಮಾಣ ಹೆಚ್ಚುತ್ತದೆ. ಎಲ್ಲ ನಿಗಮ ವಿಲೀನವಾದಾಗ ಅಗತ್ಯಕ್ಕನುಗುಣವಾಗಿ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಬಹುದು. ಕಡಿಮೆ ಪ್ರಯಾಣಿಕರಿದ್ದರೆ ಅಂತಹ ಬಸ್ಸುಗಳಲ್ಲಿದ್ದವರಿಗೆ ಅದೇ ಮಾರ್ಗದಲ್ಲಿರುವ ಬೇರೆ ಬಸ್ಸುಗಳಲ್ಲಿ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ' ಎಂದು ಅವರು ವಿವರಣೆ ನೀಡಿದರು.
ಇದನ್ನೂ ಓದಿ: 'ಪಾದಯಾತ್ರೆ ನಡೆಸಿದರೆ ಸಾಲದು': 'ಭಾರತ್ ಜೋಡೊ' ಸಮಾವೇಶದ ಕಸ ಗುಡಿಸಿ ಸ್ವಚ್ಛಗೊಳಿಸಿದ ಸಚಿವ ಶ್ರೀರಾಮುಲು
‘ಕೋವಿಡ್ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಆದಾಯವೇ ಇರಲಿಲ್ಲ. ಸಾರಿಗೆ ನೌಕರರ ವೇತನ ನೀಡುವ ಸಲುವಾಗಿ ರಾಜ್ಯ ಸರಕಾರ 6ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತು. ಇದೀಗ ಪರಿಸ್ಥಿತಿ ಸುಧಾರಿಸಿದ್ದರೂ ಸಾರಿಗೆ ಸಂಸ್ಥೆಯ ನಷ್ಟ ಮಾತ್ರ ತಪ್ಪಿಲ್ಲ.ಹೀಗಾಗಿ ಶ್ರೀನಿವಾಸ ಮೂರ್ತಿಯವರ ಶಿಫಾರಸಿನಂತೆ ಸಾರಿಗೆ ಸಂಸ್ಥೆಯ ಎಲ್ಲ ನಿಗಮಗಳನ್ನು ವಿಲೀನಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.