ಅ.ಭಾರತ ಫಿಡೆ ರೇಟೆಡ್ ಚೆಸ್ ಟೂರ್ನಿ; ಶ್ರೀನಾಥ್ ರಾವ್ ಎಸ್.ವಿ. ಚಾಂಪಿಯನ್

ಕುಂದಾಪುರ, ಅ.17: ಜಿಲ್ಲಾ ಚೆಸ್ ಅಸೋಸಿಯೇಷನ್ ಸಹಯೋಗದಲ್ಲಿ ಕುಂದಾಪುರದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ರಶ್ಮಿ ಶೆಟ್ಟಿ ಸ್ಮರಣಾರ್ಥ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾಟದ ಎರನಡೇ ಆವೃತ್ತಿಯಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ (ಐಎಂ) ಶ್ರೀನಾಥ್ ರಾವ್ ಎಸ್.ವಿ. ಚಾಂಪಿಯನ್ ಆಗಿ ಮೂಡಿಬಂದರು.
ರವಿವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ಶ್ರೀನಾಥ್ ರಾವ್ ಅವರು ಒಟ್ಟು 9 ಅಂಕಗಳನ್ನು ಸಂಗ್ರಹಿಸುವ ಮೂಲಕ ಅಗ್ರಸ್ಥಾನಿಯಾದರು. ಈ ಮೂಲಕ ಅವರು ಮಿರುಗುವ ಟ್ರೋಫಿ ಹಾಗೂ 30000ರೂ.ಗಳನ್ನು ಗೆದ್ದುಕೊಂಡರು.
ಛತ್ತೀಸ್‌ಗಢದ ಶ್ರೀನಾಥ್ ರಾವ್ ಅವರು ಅಂತಿಮ ಸುತ್ತಿನಲ್ಲಿ ಮತ್ತೊಬ್ಬ ಐಎಂ ಆಟಗಾರ ತೆಲಂಗಾಣದ ಚಕ್ರವರ್ತಿ ರೆಡ್ಡಿ ಅವರನ್ನು ಸೋಲಿಸಿ ಪೂರ್ಣ ಅಂಕ ಸಂಪಾದಿಸಿದರು. ರೆಡ್ಡಿ ಅವರು ಒಟ್ಟು ಏಳು ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು. ದಕ್ಷಿಣ ರೈಲ್ವೆಯನ್ನು ಪ್ರತಿನಿಧಿಸಿದ ಕೇರಳದ ಐಎಂ ರತ್ನಾಕರ ಕೆ.ಎಂಟು ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನ ಪಡೆದರಲ್ಲದೇ, 20000ರೂ. ನಗದು ಬಹುಮಾನವನ್ನೂ ಗೆದ್ದುಕೊಂಡರು.
ಕರ್ನಾಟಕವನ್ನು ಪ್ರತಿನಿಧಿಸಿದ ಶರಣ್ ರಾವ್, ಇಶಾ ಶರ್ಮ ಹಾಗೂ ಮಹಾರಾಷ್ಟ್ರದ ಅಖಿಲೇಶ್ ನಗರೆ ಅವರು ಸಹ ತಲಾ ಎಂಟು ಅಂಕಗಳನ್ನು ಸಂಗ್ರಹಿಸಿದರಾದರೂ ಮೂರರಿಂದ ಐದನೇ ಸ್ಥಾನ ಪಡೆದು ಕ್ರಮವಾಗಿ 10000ರೂ, 8000ರೂ. ಹಾಗೂ 7000ರೂ. ನಗದು ಬಹುಮಾನ ಪಡೆದರು.
ಪಂದ್ಯಾಟದಲ್ಲಿ ಭಾಗವಹಿಸಿದ ಉಡುಪಿಯ ಆಟಗಾರರಲ್ಲಿ ಸಾತ್ವಿಕ್ ಬಿ. ಆಚಾರ್ಯ ಅವರು ಮೊದಲ ಸ್ಥಾನ ಪಡೆದು ೨,೦೦೦ರೂ., ಚಿನ್ಮಯ್ ಎಸ್. ಭಟ್ ಎರಡನೇ ಸ್ಥಾನದೊಂದಿಗೆ ೧,೫೦೦ರೂ., ಕಾರ್ತಿಕ್ ಆರ್ ಮೂರನೇ ಸ್ಥಾನದೊಂದಿಗೆ ೧,೫೦೦ರೂ. ನಗದು ಬಹುಮಾನವನ್ನು ಪಡೆದರು. ಉಳಿದಂತೆ ಪ್ರತಿ ವಯೋವರ್ಗದಲ್ಲೂ ಮೂರು ಅಗ್ರಸ್ಥಾನಿಗಳಿಗೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಫಿಡೆ ರೇಟೆಡ್ ಈ ಚೆಸ್ ಪಂದ್ಯಾಟದಲ್ಲಿ ರ್ನಾಕಟಕವು ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು ೩೫೫ ಸ್ಪರ್ಧಿಗಳು ಭಾಗವಹಿಸಿದ್ದರು.







