ನ್ಯಾಯ ಸಿಗುವವರೆಗೂ ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಯೋಜಿತ ಹತ್ಯೆಗಳು ನಿಲ್ಲುವುದಿಲ್ಲ: ಫಾರೂಕ್ ಅಬ್ದುಲ್ಲಾ

ಶ್ರೀನಗರ,ಅ.17: ನ್ಯಾಯ ದೊರಕುವವರೆಗೂ ಜಮ್ಮು-ಕಾಶ್ಮೀರ(Jammu and Kashmir)ದಲ್ಲಿ ಭಯೋತ್ಪಾದಕರಿಂದ ಯೋಜಿತ ಹತ್ಯೆಗಳು ನಿಲ್ಲುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ (Farooq Abdullah)ಅವರು ಸೋಮವಾರ ಆರೋಪಿಸಿದ್ದಾರೆ.
ರಿಯಾಸಿಯ ಕತ್ರಾದಲ್ಲಿ ಪಕ್ಷದ ಕಾರ್ಯಕ್ರಮದ ನೇಪಥ್ಯದಲ್ಲಿ ಕಣಿವೆಯಲ್ಲಿನ ಇತ್ತೀಚಿನ ಹತ್ಯೆಗಳ,ನಿರ್ದಿಷ್ಟವಾಗಿ ಕಳೆದ ಶನಿವಾರ ಶೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತರೋರ್ವರ ಹತ್ಯೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ಲಾ,ನ್ಯಾಯ ಸಿಗುವವರೆಗೆ ಇದು ಎಂದೂ ನಿಲ್ಲುವುದಿಲ್ಲ. ವಿಧಿ 370ರಿಂದಾಗಿ ಇಂತಹ ಹತ್ಯೆಗಳು ನಡೆಯುತ್ತಿವೆ ಎಂದು ಅವರು (ಬಿಜೆಪಿ) ಈ ಹಿಂದೆ ಹೇಳುತ್ತಿದ್ದರು. ಈಗ ಅದನ್ನು ರದ್ದುಗೊಳಿಸಲಾಗಿದೆ,ಆದರೂ ಹತ್ಯೆಗಳೇಕೆ ನಡೆಯುತ್ತಿವೆ? ಇದಕ್ಕೆ ಹೊಣೆಗಾರರು ಯಾರು ಎಂದು ಮರುಪ್ರಶ್ನಿಸಿದರು.
ವಿಧಿ 370ನ್ನು ರದ್ದುಗೊಳಿಸಿ ಮೂರು ವರ್ಷಗಳೇ ಕಳೆದುಹೋಗಿವೆ,ಆದರೆ ಜನರು ಈಗಲೂ ಸಾಯುತ್ತಿದ್ದಾರೆ. ಹತ್ಯೆಗಳಿಗೆ ವಿಧಿ 370 ಕಾರಣವಾಗಿದ್ದರೆ ಈ ಅಮಾಯಕ ಪಂಡಿತ ಏಕೆ ಹತ್ಯೆಯಾಗಿದ್ದಾನೆ? ಅದಕ್ಕೆ ಏನಾದರೂ ಕಾರಣವಿರಲೇಬೇಕು. ಹತ್ಯೆಗಳಿಗೆ ವಿಧಿ 370 ಕಾರಣವಲ್ಲ,ಏಕೆಂದರೆ ಭಯೋತ್ಪಾದನೆಯನ್ನು ಹೊರಗಿನಿಂದ ಪ್ರಾಯೋಜಿಸಲಾಗುತ್ತಿದೆ ಎಂದು ಅಬ್ದುಲ್ಲಾ ಹೇಳಿದರು.
ಈ ನಡುವೆ,ಶನಿವಾರ ಶೋಪಿಯಾನ್ ಜಿಲ್ಲೆಯ ಚೌಧರಿ ಗುಂದ್ (Chaudhary Gund)ಪ್ರದೇಶದಲ್ಲಿ ನಡೆದಿದ್ದ ಕಾಶ್ಮೀರಿ ಪಂಡಿತ ಪೂರಣ್ ಕೃಷ್ಣ ಭಟ್(Krishna Bhatt) ಅವರ ಹತ್ಯೆ ಹೊಣೆಯನ್ನು ಕಾಶ್ಮೀರ ಫ್ರೀಡಂ ಫೈಟರ್ಸ್ ಗುಂಪು ಹೊತ್ತುಕೊಂಡಿದೆ ಎಂದು ಡಿಐಜಿ ಸುಜಿತ ಕುಮಾರ ತಿಳಿಸಿದರು. ಪ್ರತ್ಯಕ್ಷದರ್ಶಿಗಳು ತಿಳಿಸಿರುವಂತೆ ಒಬ್ಬನೇ ಹಂತಕ ಭಟ್ ಅವರಿಗೆ ಗುಂಡಿಕ್ಕಿದ್ದ ಎಂದರು.
ಭಟ್ ಹತ್ಯೆಯನ್ನು ಖಂಡಿಸಿರುವ ಜಮ್ಮು-ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದ್ರ ರೈನಾ ಅವರು,ಹತ್ಯೆಗೆ ಸಂಚು ಹೂಡಿದ್ದ ಭಯೋತ್ಪಾದಕರನ್ನು ಮಟ್ಟ ಹಾಕಲಾಗುವುದು ಎಂದು ಹೇಳಿದ್ದಾರೆ.







