ಅಧ್ಯಕ್ಷರ ತಪ್ಪು ಮಾಹಿತಿಯಿಂದ ಕರಕುಶಲ ಅಭಿವೃದ್ಧಿ ನಿಗಮಕ್ಕೆ ದಂಡ: ಐಪಿಎಸ್ ಅಧಿಕಾರಿ ಡಿ.ರೂಪಾ

ಬೆಂಗಳೂರು, ಅ.17: ತಮ್ಮ ಆಡಳಿತ ಅವಧಿಯಲ್ಲಿ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ನೀಡಿದ ತಪ್ಪು ಮಾಹಿತಿಯಿಂದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ದಂಡ ಪಾವತಿ ಮಾಡಬೇಕಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಕುರಿತು ಪ್ರತಿಕ್ರಿಯಿಸಿದ ಅವರು, ರಾಘವೇಂದ್ರ ಶೆಟ್ಟಿ ತಪ್ಪು ಪಾನ್‍ಕಾರ್ಡ್ ನೀಡಿದ್ದರು. ಅದರಿಂದ ನಮ್ಮ ನಿಗಮಕ್ಕೆ ದಂಡ ಬಂದಿದೆ. ಅದರ ಜಾಡು ಹಿಡಿದು ನಾವು ಹೋದಾಗ ಡಿಐಎನ್ ಆಗಿರುವುದು ಪತ್ತೆಯಾಗಿದೆ. ಇದರಿಂದಾಗಿ ಎಫ್‍ಐಆರ್ ದಾಖಲಿಸಬೇಕಾಗಿದೆ ಎಂದರು.
ಈ ಬಗ್ಗೆ ಗೊತ್ತಿದ್ದೂ ಹುದ್ದೆ ಅಲಂಕರಿಸಿ ಒಂದು ವರ್ಷ ಎಂಟು ತಿಂಗಳು ವೇತನ ಪಡೆದಿದ್ದಾರೆ. ಸುಮಾರು 40 ಲಕ್ಷ ರೂಪಾಯಿಯಷ್ಟು ಹಣ ಪಡೆದುಕೊಂಡಂತಾಗಿದೆ. ನಿಗಮದಿಂದ ಎನ್‍ಓಸಿ ಪಡೆದು ಕೈಗೊಂಡ ದುಬೈ ಪ್ರವಾಸ, ಸಂಬಳ ಸೇರಿ 40 ಲಕ್ಷ ರೂ.ಹಣ ಪಡೆದಂತಾಗಿದೆ ಎಂದು ಅವರು ತಿಳಿಸಿದರು.
ಇನ್ನೂ, ಅವರ ಮೇಲೆ 31 ಕ್ರಿಮಿನಲ್ ಮೊಕದ್ದಮೆ, 15 ಜಾಮೀನುರಹಿತ ವಾರಂಟ್ ಇದೆ. ಇಂತಹವರಿಗೆ ಆ ಹುದ್ದೆ ಏಕೆ ನೀಡಲಾಯಿತು ಎನ್ನುವುದು ಗೊತ್ತಿಲ್ಲ ಎಂದು ರೂಪಾ ಹೇಳಿದರು.