ಕೊರೋನಾ ಸೋಂಕಿನ ಪರಿಣಾಮ ಬಡತನದ ಹೆಚ್ಚಳ: ವಿಶ್ವಬ್ಯಾಂಕ್

ವಾಷಿಂಗ್ಟನ್, ಅ.17: ಕೊರೋನ ಸೋಂಕು(Corona infection) ಜಗತ್ತನ್ನು ಅಸಮಾನತೆಯ ಹೆಚ್ಚಿನ ಆಳಕ್ಕೆ ಮುಳುಗಿಸಿದ ಜತೆಗೇ, 1990ರ ಬಳಿಕ ಬಡತನದ ಅತೀ ದೊಡ್ಡ ಹೆಚ್ಚಳಕ್ಕೆ ಕಾರಣವಾಗಿದೆ. ಹವಾಮಾನ ಬದಲಾವಣೆಯ ಆಘಾತ ಹಾಗೂ ವಿಶ್ವದಲ್ಲಿ ಅತ್ಯಧಿಕ ಆಹಾರಧಾನ್ಯ ಉತ್ಪಾದಿಸುವ ಎರಡು ದೇಶಗಳ ನಡುವಿನ ಉಕ್ರೇನ್ ಬಿಕ್ಕಟ್ಟು (The Ukraine crisis)ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ವಿಶ್ವಬ್ಯಾಂಕ್(World Bank) ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಗತ್ತಿನಲ್ಲಿ ಅತೀ ಹೆಚ್ಚು ಗೋಧಿ ಉತ್ಪಾದಿಸುವ ದೇಶಗಳಾದ ರಶ್ಯ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವುದರಿಂದ ಆಹಾರ ಧಾನ್ಯಗಳ ಪೂರೈಕೆಗೆ ತಡೆಯಾಗಿದೆ. ಕೊರೋನ ಸಾಂಕ್ರಾಮಿಕವು ಜಾಗತಿಕ ಕಡುಬಡತನದ ದರದಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಗಿದ್ದು 2019ರಲ್ಲಿ 8.4%ದಷ್ಟಿದ್ದ ಕಡುಬಡತನದ ಪ್ರಮಾಣ 2020ರಲ್ಲಿ 9.3%ಕ್ಕೆ ಹೆಚ್ಚಿದೆ. ಈ ಹೆಚ್ಚಳದೊಂದಿಗೆ 2020ರ ಅಂತ್ಯದ ವೇಳೆಗೆ ಹೆಚ್ಚುವರಿ 70 ದಶಲಕ್ಷದಷ್ಟು ಜನತೆ ಕಡುಬಡತನದ ವ್ಯಾಪ್ತಿಗೆ ಸೇರಿದ್ದು ಜಾಗತಿಕ ಪ್ರಮಾಣ 700 ದಶಲಕ್ಷಕ್ಕೆ ಹೆಚ್ಚಿದೆ ಎಂದು `ಬಡತನ ಮತ್ತು ಸಮೃದ್ಧಿ ಹಂಚಿಕೆ 2022- ಸರಿಪಡಿಸುವ ಕ್ರಮಗಳ ವರದಿ'ಯಲ್ಲಿ ವಿಶ್ವಬ್ಯಾಂಕ್ ಹೇಳಿದೆ.
ಕೊರೋನ ಸಾಂಕ್ರಾಮಿಕದ ಕಾರಣ ದಶಕಗಳಲ್ಲೇ ಪ್ರಥಮ ಬಾರಿಗೆ ಜಾಗತಿಕ ಅಸಮಾನತೆ ಹೆಚ್ಚಿದೆ ಮತ್ತು ಶ್ರೀಮಂತರ ಆದಾಯ ನಷ್ಟಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಬಡವರ ಆದಾಯ ನಷ್ಟವಾಗಿದೆ. 2022 ಎರಡು ದಶಕಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಡತನ ಕಡಿತದ ವರ್ಷವಾಗಿದ್ದು 2022ರ ಬಳಿಕವೂ ಸುಮಾರು 685 ದಶಲಕ್ಷ ಜನತೆ ಕಡುಬಡತನದ ವ್ಯಾಪ್ತಿಯಲ್ಲಿಯೇ ಮುಂದುವರಿಯಲಿದ್ದಾರೆ.
2019ರಲ್ಲಿ ಜಾಗತಿಕ ಜನಸಂಖ್ಯೆಯ ಸುಮಾರು 47 %ದಷ್ಟು ಜನತೆ ಜೀವನ ನಿರ್ವಹಣೆಗೆ ಹೆಣಗಾಡಿದ್ದರು. ಈ ಸಮಸ್ಯೆಯನ್ನು ಸರಿಪಡಿಸುವ ಕ್ರಮಗಳಾಗಿ, ವಿತ್ತ ನೀತಿಯಲ್ಲಿ ಮೂರು ರಚನಾತ್ಮಕ ಬದಲಾವಣೆಯನ್ನು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 1. ಸಬ್ಸಿಡಿಯ ಬದಲು ಬಡ ಮತ್ತು ದುರ್ಬಲ ವರ್ಗದವರನ್ನು ಗುರಿಯಾಗಿಸಿಕೊಂಡು ನೆರವು ಒದಗಿಸುವುದು, 2. ದೀರ್ಘಾವಧಿಯ ಅಭಿವೃದ್ಧಿಯನ್ನು ಬೆಂಬಲಿಸುವ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು ಮತ್ತು 3. ಬಡವರಿಗೆ ತೊಂದರೆಯಾಗದ ರೀತಿಯಲ್ಲಿ ಆದಾಯದ ಕ್ರೋಢೀಕರಣಕ್ಕೆ ಸಲಹೆ ಮಾಡಲಾಗಿದೆ.