ಮಾನನಷ್ಟ ಪ್ರಕರಣ ಸಮನ್ಸ್ ವಿರುದ್ಧದ ಮನೋಜ್ ತಿವಾರಿ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಅ. 16: ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ತನ್ನ ವಿರುದ್ಧ ಜಾರಿಗೊಳಿಸಿದ್ದ ಸಮನ್ಸ್ ಅನ್ನು ರದ್ದುಗೊಳಿಸಲು ನಿರಾಕರಿಸಿ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಮನೋಜ್ ತಿವಾರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಆಮ್ ಆದ್ಮಿ ಪಕ್ಷ 2,000 ಕೋ. ರೂ. ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿರುವುದಕ್ಕೆ ಬಿಜೆಪಿ ನಾಯಕರಾದ ಪರ್ವೇಶ್ ಸಿಂಗ್ ಹಾಗೂ ವಿಜೇಂದರ್ ಗುಪ್ತಾರೊಂದಿಗೆ ತಿವಾರಿ ವಿರುದ್ಧ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು 2019ರಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ದಿಲ್ಲಿಯಲ್ಲಿ 892 ಕೋ.ರೂ. ವೆಚ್ಚದಲ್ಲಿ ನಿರ್ಮಿಸಬಹುದಾಗಿದ್ದ ತರಗತಿ ಕೊಠಡಿಗಳಿಗೆ ಹೆಚ್ಚುವರಿಯಾಗಿ 2,000 ಕೋ.ರೂ. ವೆಚ್ಚ ಮಾಡಲಾಗಿದೆ ಎಂದು ತಿವಾರಿ ಪ್ರತಿಪಾದಿಸಿದ್ದರು. ಕಪೋಲಕಲ್ಪಿತ ಆರೋಪಗಳ ಆಧಾರದಲ್ಲಿ ನಿಂದನಾತ್ಮಕ ವಿಷಯಗಳನ್ನು ಪ್ರಸಾರ ಮಾಡುವ ಮೂಲಕ ಮೂವರು ಬಿಜೆಪಿ ನಾಯಕರು ತನ್ನ ವರ್ಚಸ್ಸಿಗೆ ಕಳಂಕ ಹಚ್ಚಿದ್ದಾರೆ ಎಂದು ಸಿಸೋಡಿಯಾ ಆರೋಪಿಸಿದ್ದರು. ಅಲ್ಲದೆ ಅವರು ಕ್ಷಮೆ ಕೋರುವಂತೆ ಆಗ್ರಹಿಸಿದ್ದರು.
ಪ್ರಕರಣದಲ್ಲಿ ತಮ್ಮನ್ನು ಆರೋಪಿಗಳನ್ನಾಗಿಸಿ ವಿಚಾರಣಾ ನ್ಯಾಯಾಲಯ 2019 ನವೆಂಬರ್ 28ರಂದು ನೀಡಿದ ಸಮನ್ಸ್ ಅನ್ನು ಬಿಜೆಪಿ ನಾಯಕರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಉಚ್ಚ ನ್ಯಾಯಾಲಯ ವಿಚಾರಣೆಯಲ್ಲಿ ಬಿಜೆಪಿ ನಾಯಕರು ನೀಡಿದ ಹೇಳಿಕೆ ಮೇಲ್ನೋಟಕ್ಕೆ ಸಿಸೋಡಿಯಾ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಅಭಿಪ್ರಾಯಿಸಿತ್ತು.
ದಿಲ್ಲಿ ಉಚ್ಚ ನ್ಯಾಯಾಲಯದ 2020ರ ಆದೇಶವನ್ನು ಪ್ರಶ್ನಿಸಿ ತಿವಾರಿ ಹಾಗೂ ಗುಪ್ತಾ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.







