ದಿಲ್ಲಿ ಮಹಿಳಾ ಆಯೋಗ ಅಧ್ಯಕ್ಷರ ಮನೆ ಮೇಲೆ ದಾಳಿ; ಎರಡು ಕಾರುಗಳಿಗೆ ಹಾನಿ

PHOTO: Twitter
ಹೊಸದಿಲ್ಲಿ, ಅ. ೧೬: ದಿಲ್ಲಿ ಮಹಿಳಾ ಆಯೋಗ (DCW)ದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ನಿವಾಸದ ಮೇಲೆ ಸೋಮವಾರ ಬೆಳಗ್ಗೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ, ಅವರ ನಿವಾಸದ ಮುಂಬಾಗದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿ ಉಂಟು ಮಾಡಿದ್ದಾರೆ.
‘‘ಸ್ವಲ್ಪ ಸಮಯಕ್ಕಿಂತ ಮುನ್ನ ಕೆಲವು ಆಕ್ರಮಣಕಾರರು ನನ್ನ ಮನೆ ಪ್ರವೇಶಿಸಿದ್ದಾರೆ ಹಾಗೂ ದಾಳಿ ನಡೆಸಿದ್ದಾರೆ. ನನ್ನ ಹಾಗೂ ತಾಯಿಗೆ ಸೇರಿದ ಕಾರಿಗೆ ಹಾನಿ ಉಂಟು ಮಾಡಿದ್ದಾರೆ. ನಾವು ಮನೆಯಲ್ಲಿ ಇಲ್ಲದೇ ಇದ್ದುದು ಒಳ್ಳೆಯದಾಯಿತು. ಇಲ್ಲದೇ ಇದ್ದರೆ ಏನಾಗುತ್ತಿತ್ತು ಎಂದು ಹೇಳಲು ಸಾಧ್ಯವಿರಲಿಲ್ಲ. ಆದರೆ, ಏನೇ ಮಾಡಿದರೂ ನಾನು ಹೆದರಲಾರೆ’’ ಎಂದ ಮಲಿವಾಲ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದಿಲ್ಲಿ ಪೊಲೀಸರ ಟ್ವಿಟರ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡುವ ಮೂಲಕ ಅವರು ಟ್ವೀಟ್ ಅನ್ನು ಅಂತಿಮಗೊಳಿಸಿದ್ದಾರೆ. ಅಲ್ಲದೆ, ತಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದ ಬಳಿಕ ಮಾತ್ರವೇ ಈ ದಾಳಿಯ ಹಿಂದಿನ ಉದ್ದೇಶ ತಿಳಿಯಬಹುದು. ಆದರೆ, ಹೇಳಿಕೆ ಹಾಗೂ ಕೆಲಸದ ರೀತಿಯ ಕಾರಣಕ್ಕೆ ಮಲಿವಾಲ್ ಅವರು ಆಗಾಗ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.







