ಕಾನೂನು ಬಾಹಿರವಾಗಿ ಕಾರ್ಮಿಕ ಕಾರ್ಡ್ ಪಡೆದರೆ ಕ್ರಿಮಿನಲ್ ಮೊಕದ್ದಮೆ: ಸಚಿವ ಶಿವರಾಂ ಹೆಬ್ಬಾರ್
ಸಚಿವ ಶಿವರಾಂ ಹೆಬ್ಬಾರ್
ಹಾವೇರಿ, ಅ.17: ಕಾನೂನು ಬಾಹಿರವಾಗಿ ಕಾರ್ಮಿಕರ ಕಾರ್ಡ್ ಪಡೆದ ಪ್ರಕರಣಗಳು ಕಂಡುಬಂದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಂ ಹೆಬ್ಬಾರ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ರಾಣೇಬೆನ್ನೂರಿನಲ್ಲಿ ರಾಜ್ಯ ವಿಮಾ ಚಿಕಿತ್ಸಾಲಯ (ಇಎಸ್ಐ) ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಅರ್ಹರಲ್ಲದವರು ಕಾರ್ಮಿಕರ ಕಾರ್ಡ್ ಪಡೆದ ಪ್ರಕರಣಗಳು ಕಂಡುಬಂದಲ್ಲಿ ಕಾರ್ಮಿಕರ ಸಂಘಟನೆಗಳು ಇಲಾಖೆಗೆ ಮಾಹಿತಿ ನೀಡಬೇಕು. ಈಗಾಗಲೇ ಅನರ್ಹರನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿದೆ ಎಂದರು.
ದೇಶದಲ್ಲೇ ರಾಜ್ಯದ ಕಾರ್ಮಿಕ ಇಲಾಖೆ ಕ್ರಾಂತಿಕಾರಿ ಬದಲಾವಣೆ ತಂದಿದೆ. ಎರಡು ವರ್ಷಗಳಲ್ಲಿ ರಾಜ್ಯದ ಕಾರ್ಮಿಕರ ಮಕ್ಕಳಿಗೆ 845 ಕೋಟಿ ವಿದ್ಯಾರ್ಥಿ ವೇತನ ಪಾವತಿಸಲಾಗಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ 500 ಕಾರ್ಮಿಕರ ಮಕ್ಕಳನ್ನು ಕೆಎಎಸ್ ಹಾಗೂ 250 ಕಾರ್ಮಿಕರ ಮಕ್ಕಳನ್ನು ಐಎಎಸ್ ತರಬೇತಿಗೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಕಾರ್ಮಿಕರ ಮಕ್ಕಳಿಗೆ ವಿದೇಶದಲ್ಲಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಸಂಪೂರ್ಣ ವೆಚ್ಚವನ್ನು ಸರಕಾರಿ ಭರಿಸಲಿದೆ ಎಂದ ಅವರು, ರಾಜ್ಯದ 35 ಕಾರ್ಮಿಕರ ಮಕ್ಕಳಿಗೆ 35 ಲಕ್ಷ ವೆಚ್ಚದಲ್ಲಿ ಪೈಲೆಟ್ ತರಬೇತಿ ನೀಡಲಾಗುವುದು ಭರವಸೆ ನೀಡಿದರು.