ರಿಯಲ್ ಮ್ಯಾಡ್ರಿಡ್ ಸ್ಟ್ರೈಕರ್ ಕರೀಮ್ ಬೆಂಝೆಮಾಗೆ ಬ್ಯಾಲನ್ ಡಿ'ಓರ್ ಪ್ರಶಸ್ತಿ
ಮ್ಯಾಂಚೆಸ್ಟರ್ ಸಿಟಿ ಅತ್ಯುತ್ತಮ ಕ್ಲಬ್

ಕರೀಮ್ ಬೆಂಝೆಮಾ, Photo:twitter
ಪ್ಯಾರಿಸ್: ಇಲ್ಲಿ ನಡೆದ ಸಮಾರಂಭದಲ್ಲಿ ರಿಯಲ್ ಮ್ಯಾಡ್ರಿಡ್ ಸ್ಟ್ರೈಕರ್ ಕರೀಮ್ ಬೆಂಝೆಮಾ ಮೊದಲ ಬಾರಿ ಪ್ರತಿಷ್ಠಿತ 2022 ರ ಪುರುಷರ ಬ್ಯಾಲನ್ ಡಿ'ಓರ್ ಪ್ರಶಸ್ತಿಗೆ ಭಾಜನರಾದರು.
ಫ್ರೆಂಚ್ ಸ್ಟ್ರೈಕರ್ ಕಳೆದ ಋತುವಿನಲ್ಲಿ 46 ಪಂದ್ಯಗಳಲ್ಲಿ 44 ಗೋಲುಗಳನ್ನು ಗಳಿಸಿ ರಿಯಲ್ ಮ್ಯಾಡ್ರಿಡ್ UEFA ಚಾಂಪಿಯನ್ಸ್ ಲೀಗ್ ಹಾಗೂ ಲಾ ಲಿಗಾವನ್ನು ಗೆಲ್ಲಲು ಸಹಾಯ ಮಾಡಿದ್ದರು.
1998 ರ ಬ್ಯಾಲನ್ ಡಿ'ಓರ್ ವಿಜೇತ ಝೈನುದ್ದೀನ್ ಝೈದಾನ್ ಅವರು ಟ್ರೋಫಿಯನ್ನು ಬೆಂಝೆಮಾಗೆ ಪ್ರದಾನಿಸಿದರು.ಝೈದಾನ್ ಬಳಿಕ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದ ಫ್ರಾನ್ಸ್ ನ 2ನೇ ಆಟಗಾರನೆಂಬ ಹಿರಿಮೆಗೆ ಕರೀಮ್ ಪಾತ್ರರಾದರು
ಬೆಂಝೆಮಾ ಅವರು 1956 ರಲ್ಲಿ ಸ್ಟಾನ್ಲಿ ಮ್ಯಾಥ್ಯೂಸ್ ನಂತರ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡರು.
ಸಮಾರಂಭದಲ್ಲಿ ಮಾತನಾಡಿದ 34 ವರ್ಷ ವಯಸ್ಸಿನ ಬೆಂಝೆಮಾ, "ತನಗೆ ವಯಸ್ಸು ಕೇವಲ ಒಂದು ಸಂಖ್ಯೆ. ಇನ್ನೂ ಉನ್ನತ ಮಟ್ಟದಲ್ಲಿ ಆಡುವ ಬಯಕೆಯನ್ನು ಹೊಂದಿದ್ದೇನೆ'' ಎಂದರು.
ಏತನ್ಮಧ್ಯೆ, ಬಾರ್ಸಿಲೋನ ಮಿಡ್ಫೀಲ್ಡರ್ ಅಲೆಕ್ಸಿಯಾ ಪುಟೆಲ್ಲಾಸ್ ಸತತ ಎರಡನೇ ವರ್ಷ ಮಹಿಳಾ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಗೆದ್ದರು. ಈ ಸಾಧನೆ ಮಾಡಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮ್ಯಾಂಚೆಸ್ಟರ್ ಸಿಟಿ ಕಳೆದ ಋತುವಿನ ಅತ್ಯುತ್ತಮ ಕ್ಲಬ್ ಎಂದು ಗುರುತಿಸಲ್ಪಟ್ಟಿತು.