2023ರ ಏಶ್ಯಕಪ್ ಗಾಗಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ: ಜಯ್ ಶಾ

ಜಯ್ ಶಾ Photo:PTI
ಮುಂಬೈ: ಭಾರತೀಯ ಕ್ರಿಕೆಟ್ ತಂಡವು 2023ರ ಏಶ್ಯಕಪ್ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥ ಜಯ್ ಶಾ ಮಂಗಳವಾರ ಮುಂಬೈನಲ್ಲಿ ನಡೆದ 91ನೇ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಹೇಳಿದ್ದಾರೆ.
2023 ರ ಏಶ್ಯಕಪ್ ಅನ್ನು ಪಾಕಿಸ್ತಾನವು ಆಯೋಜಿಸಲಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಟೀಮ್ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಮುಕ್ತವಾಗಿದೆ ಎಂದು ಮೂಲಗಳು ಈ ಹಿಂದೆ ತಿಳಿಸಿದ್ದವು. ಬಿಸಿಸಿಐ ಕಾರ್ಯದರ್ಶಿಯೂ ಆಗಿರುವ ಶಾ, 2023ರ ಏಶ್ಯಕಪ್ ಅನ್ನು ಪಾಕಿಸ್ತಾನದಲ್ಲಲ್ಲ, ತಟಸ್ಥ ಸ್ಥಳದಲ್ಲಿ ಆಡಬಹುದು ಎಂದು ಹೇಳಿದ್ದಾರೆ.
ಭಾರತ ಕೊನೆಯದಾಗಿ 2005-06ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಭಾರತ ಹಾಗೂ ಪಾಕಿಸ್ತಾನವು 2012-13ರಲ್ಲಿ ಮೂರು ಟ್ವೆಂಟಿ-20 ಹಾಗೂ 3 ಏಕದಿನ ಪಂದ್ಯಗಳಿಗಾಗಿ ಭಾರತಕ್ಕೆ ಪ್ರವಾಸ ಮಾಡಿದ ನಂತರ ಭಾರತ ಮತ್ತು ಪಾಕಿಸ್ತಾನವು ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿಲ್ಲ. ಅಂದಿನಿಂದ ಐಸಿಸಿ ಆಯೋಜಿತ ಟೂರ್ನಿಗಳು ಹಾಗೂ ಏಶ್ಯಕಪ್ ನಲ್ಲಿ ಮಾತ್ರ ಸೆಣಸಾಟ ನಡೆಸಿವೆ.
ಎರಡು ತಂಡಗಳ ನಡುವಿನ ಪಂದ್ಯಗಳು ಯಾವಾಗಲೂ ಬಹು ನಿರೀಕ್ಷಿತವಾಗಿರುತ್ತವೆ ಮತ್ತು ಕ್ರೀಡಾಂಗಣಗಳು ಹೌಸ್ ಫುಲ್ ಆಗಿರುತ್ತವೆ. ಅಕ್ಟೋಬರ್ 23 ರಂದು ಎರಡು ತಂಡಗಳ ನಡುವೆ ನಡೆಯುವ ವಿಶ್ವಕಪ್ ಪಂದ್ಯದ ಟಿಕೆಟ್ಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಾರಾಟವಾಗಿವೆ.