ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ: ಡಾ.ಎಂ.ಎಸ್.ವಲಿಯತ್ತಾನ್

ಕೊಣಾಜೆ: ಹೃದ್ರೋಗ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಭಾರತದಲ್ಲಿ ಅನೇಕ ಸಂಶೋಧನೆಗಳು ನಡೆದಿದ್ದು, ಭಾರತೀಯ ನಿರ್ಮಿತ ಟಿಟಿಕೆ ಚಿತ್ರ ಹೃದಯ ಕವಾಟ ಅಳವಡಿಕೆಯಿಂದ ಲಕ್ಷಾಂತರ ಹೃದ್ರೋಗಪೀಡಿತರು ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಫಲಿತಾಂಶದೊಂದಿಗೆ ಚಿಕಿತ್ಸೆ ಪಡೆದಿದ್ದು, ಇಂತಹ ಕಾರ್ಯಗಾರಗಳಿಂದ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ನಡೆಯಲು ಪೂರಕವಾಗಬೇಕು ಎಂದು ಮಾಹೆ ವಿಶ್ರಾಂತ ಕುಲಪತಿ ಪದ್ಮವಿಭೂಷಣ ಡಾ. ಎಂ.ಎಸ್.ವಲಿಯತ್ತಾನ್ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ಆವಿಷ್ಕಾರ್ ಸಭಾಂಗಣದಲ್ಲಿ ದಿ. ಅಸೋಸಿಯೇಷನ್ ಆಫ್ ಕಾರ್ಡಿಯೋವ್ಯಾಸ್ಕ್ಯುಲರ್ - ತೊರಾಸಿಕ್ ಸರ್ಜನ್ಸ್ (ಹೃದಯರಕ್ತನಾಳದ ಎದೆಗೂಡಿನ ಶಸ್ತ್ರಚಿಕಿತ್ಸಕರು) ಇದರ ಐಎಸಿಟಿಎಸ್ ಮಿಡ್ ಟರ್ಮ್ ಕಾರ್ಡಿಯಾಕ್ ಸಿಎಮ್‍ಇ 2022 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೃದಯ ಶಸ್ರಚಿಕಿತ್ಸೆಗೆ ಪ್ರಸಿದ್ಧಿಯನ್ನು ಪಡೆದಿರುವ ಪದ್ಮಶ್ರೀ ಡಾ. ಕೆ.ಎಂ. ಚೆರಿಯನ್‍ರಂತಹ ಉತ್ತಮ ಹೃದ್ರೋಗ ತಜ್ಞರ ಮಾರ್ಗದರ್ಶನ ಹೃದಯ ರಕ್ತನಾಳದ ಎದೆಗೂಡಿನ ಶಸ್ತ್ರಚಿಕಿತ್ಸಕರಿಗೆ ಆತ್ಯಂತ ಮಹತ್ವದ್ದಾಗಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಪದ್ಮಶ್ರೀ ಡಾ. ಕೆ.ಎಂ. ಚೆರಿಯನ್ ಮಾತನಾಡಿ ಹೃದಯ ಶಸ್ತ್ರಚಿಕಿತ್ಸಕರು ಹೊಸ ವಿಚಾರಗಳ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹೊಸ ಚಿಕಿತ್ಸಾ ಪದ್ಧತಿ ತಂತ್ರಜ್ಞಾನಗಳ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಪ್ರೊ. ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ ಮಂಗಳೂರು ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ. ಮಂಗಳೂರಿಗರು ವಿಶ್ವದೆಲ್ಲೆಡೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ನಡೆಸುತ್ತಿದ್ದು, ಕಳೆದ 22 ವರುಷಗಳಿಂದ ನಿಟ್ಟೆ ವಿಶ್ವವಿದ್ಯಾನಿಲಯ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ದೇಶದೆಲ್ಲೆಡೆಯಿಂದ ಆಗಮಿಸಿರುವ ಹೃದಯ ಶಸ್ತ್ರ ತಜ್ಞರು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ಈ ಕ್ಷೇತ್ರದಲ್ಲಿ ಹೊಸ ವಿಚಾರಗಳನ್ನು ಮನನ ಮಾಡಲು ಸಹಕಾರಿ ಎಂದರು.
ಕುಲಪತಿ ಪ್ರೊ. ಸತೀಶ್ ಕುಮಾರ್ ಭಂಡಾರಿ, ಇಂಡಿಯನ್ ಅಸೋಸಿಯೇಷನ್ ಆಫ್ ಕಾರ್ಡಿಯೋವ್ಯಾಸ್ಕ್ಯುಲರ್- ತೋರಾಸಿಕ್ ಸರ್ಜರ್ನ್ ಆಧ್ಯಕ್ಷ ಡಾ. ಝಿಲೆ ಸಿಂಗ್ ಮೆಹರ್‍ವಾಲ್, ಕಾರ್ಯದರ್ಶಿ ಡಾ. ಸಿ.ಎಸ್. ಹಿರೇಮಠ್ ಕಾರ್ಯಕ್ರಮ ಆಯೋಜನಾ ಸಮಿತಿ ಕಾರ್ಯದರ್ಶಿ ಹಾಗೂ ಕ್ಷೇಮ ಹೃದಯರಕ್ತನಾಳದ ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಎ.ಜಿ. ಜಯಕೃಷ್ಣನ್, ಎ.ಜೆ. ಆಸ್ಪತ್ರೆಯ ಹೃದಯರಕ್ತ್ತನಾಳದ ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗದ ಶಸ್ತ್ರ ಚಿಕಿತ್ಸಾತಜ್ಞ ಡಾ. ಜಯಶಂಕರ್ ಮಾರ್ಲ, ಕ್ಷೇಮದ ಡಾ. ಗೋಪಾಲಕೃಷ್ಣ ಎಂ., ಡಾ. ನರೇಂಶ್ಚಂದ್ರ ಹೆಗ್ಡೆ, ಡಾ. ಅನೂಪ್ ಶ್ರೀನಿವಾಸನ್ ಉಪಸ್ಥಿತರಿದ್ದರು.