ಬೆಂಗಳೂರಿಗೆ ಮೊದಲ ಬಾರಿ ಬಂದಿಳಿದ ವಿಶ್ವದ ಅತಿದೊಡ್ಡ ವಿಮಾನದ ಪೈಲೆಟ್ ಉಡುಪಿ ಮೂಲದ ಸಂದೀಪ್ ಪ್ರಭು !

ಉಡುಪಿ, ಅ.18: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಅ.14ರಂದು ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಭೂಸ್ಪರ್ಶ ಮಾಡಿದ ವಿಶ್ವದ ಅತಿ ದೊಡ್ಡ ವಿಮಾನ ಎಮಿರೇಟ್ಸ್ ಎ380 ಇದರ ಪೈಲಟ್ ಉಡುಪಿ ಮೂಲದ ಸಂದೀಪ್ ಪ್ರಭು ಇದೀಗ ಸುದ್ದಿಯಲ್ಲಿದ್ದಾರೆ.
ದುಬೈ ಎಮಿರೇಟ್ಸ್‌ನಲ್ಲಿ ಪೈಲಟ್ ಆಗಿರುವ ಸಂದೀಪ್ ಪ್ರಭು, ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನ ಎಮಿರೇಟ್ಸ್ ಏರ್‌ಬಸ್- ಎ380 ಇದರ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಿಭಾಯಿಸಿ ಸಾಕಷ್ಟು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉಡುಪಿ ಜಿಲ್ಲೆಯ ಅಲೆವೂರು ಮೂಲದ ಶಿವರಾಯ ಪ್ರಭು ಹಾಗೂ ಆರತಿ ಪ್ರಭು ದಂಪತಿ ಪುತ್ರ ಸಂದೀಪ್ ಪ್ರಭು ಕಳೆದ 15 ವರ್ಷಗಳಿಂದ ಪೈಲಟ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂದೀಪ್ ಪ್ರಭು ಏಳನೆ ತರಗತಿಯವರೆಗೆ ಮಂಗಳೂರಿನ ಅಲೋಷಿಯಸ್‌ನಲ್ಲಿ, ಬಳಿಕ ಎಂಟನೇ ತರಗತಿ ಮೈಸೂರು, ಅದರ ನಂತರ ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಫಿಲಿಫೈನ್ಸ್ ಹಾಗೂ ದೆಹಲಿಯಲ್ಲಿ ಪೈಲೆಟ್ ಶಿಕ್ಷಣ ಹಾಗೂ ತರಬೇತಿ ಪಡೆದ ಇವರು, ಫ್ರಾನ್ಸ್‌ನಲ್ಲಿ ಉನ್ನತ ಕೋರ್ಸ್ ಮುಗಿಸಿದರು. ಬಳಿಕ ಅವರು ದುಬೈ ಎಮಿರೇಟ್ಸ್‌ನಲ್ಲಿ ಉದ್ಯೋಗಿ ಯಾಗಿ ಸೇರಿಕೊಂಡರು.
ಕನ್ನಡದಲ್ಲೇ ಸ್ವಾಗತ: ವಿಶ್ವದ ಅತಿ ದೊಡ್ಡ ವಿಮಾನ ಎಮಿರೇಟ್ಸ್ ಎ380 ಬೆಂಗಳೂರಿನಲ್ಲಿ ಮೊದಲ ಬಾರಿಗೆ ಭೂಸ್ಪರ್ಶ ಮಾಡಿದ ಸಂದರ್ಭದಲ್ಲಿ ಪೈಲಟ್ ಸಂದೀಪ್ ಪ್ರಭು, ಕನ್ನಡದಲ್ಲೇ ಸ್ವಾಗತ ಕೋರಿರುವುದು ಕೂಡ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಈ ಬಗ್ಗೆ "ವಾರ್ತಾಭಾರತಿ" ಜೊತೆ ಮಾತನಾಡಿದ ಸಂದೀಪ್ ಪ್ರಭು ಅವರ ತಂದೆ ಶಿವರಾಯ ಪ್ರಭು, ನಮ್ಮ ಮಗ ಕನ್ನಡದಲ್ಲಿ ಸ್ವಾಗತ ಕೋರಿರುವ ವಿಚಾರ ನಮ್ಮ ಜೊತೆ ಹಂಚಿಕೊಂಡು ತುಂಬಾ ಸಂತೋಷ ಪಟ್ಟಿದ್ದಾನೆ. ಸ್ವಾಗತ ಕೋರಿದ ಸಂದರ್ಭದಲ್ಲಿ ಪ್ರಯಾಣಿಕರು ಎದ್ದು ನಿಂತು ಚಪ್ಪಲೆ ತಟ್ಟಿರುವ ಅಪೂರ್ವ ಕ್ಷಣವನ್ನು ಕೂಡ ಆತ ನಮ್ಮೊಂದಿಗೆ ಹೇಳಿಕೊಂಡಿದ್ದಾನೆ. ನನ್ನ ಮಗನ ಈ ಕಾರ್ಯಕ್ಕೆ ಇನ್ಫೋಸಿಸ್‌ನ ಮೋಹನ್ ದಾಸ್ ಪೈ ಸೇರಿದಂತೆ 10-20ಸಾವಿರ ಕ್ಕೂ ಅಧಿಕ ಮಂದಿ ಅಭಿನಂದನೆ ಸಲ್ಲಿಸಿದ್ದಾರೆ. ಅವನಿಗೆ ಇಂತಹ ಒಂದು ಅವಕಾಶ ಸಿಗುತ್ತದೆ ಎಂಬುದು ಗೊತ್ತೆ ಇರಲಿಲ್ಲ ಎಂದರು.
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಮಗ ಉದ್ಯೋಗ ಕಳೆದುಕೊಂಡನು. ಆಗ ಅವನಿಗೆ ಮದುವೆ ಕೂಡ ಆಯಿತು. ಮದುವೆ ಆದ ಒಂದು ವರ್ಷದಲ್ಲಿ ಮತ್ತೆ ಕಂಪೆನಿಯು ಆತನನ್ನು ಕೆಲಸಕ್ಕೆ ಸೇರಿಸಿಕೊಂಡಿತು. ಇದೀಗ ಅವನಿಗೆ ಒಳ್ಳೆಯ ಆಫರ್ ಬರುತ್ತಿದೆ ಎಂದು ಅವರು ಹೇಳಿದರು.
ಶಿವರಾಮ ಪ್ರಭು ಉಡುಪಿ ಎಂಜಿಎಂ ಕಾಲೇಜಿನ ಹಳೆಯ ವಿದ್ಯಾರ್ಥಿ ಯಾಗಿದ್ದು, ಮಂಗಳೂರಿನ ಎಜೆ ಗ್ರೂಪ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ರಾಜೀವ ಗಾಂಧಿ ಆರೋಗ್ಯ ವಿವಿಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿ ದ್ದರು. ಇವರ ಹಿರಿಯ ಮಗ ಸತ್ಯೇಂದ್ರ ಪ್ರಭು ಇಂಜಿನಿಯರ್ ಆಗಿದ್ದು, ಪತ್ನಿ ಆರತಿ ಕಾರ್ಪೊರೇಟ್ ಇನ್ಸೂರೆನ್ಸ್ ಕೆಲಸ ಮಾಡುತ್ತಿದ್ದಾರೆ.







