`ಆರ್ಥಿಕ ಪ್ರಮಾದಕ್ಕೆ' ಕ್ಷಮೆ ಯಾಚಿಸಿದ ಬ್ರಿಟನ್ ಪ್ರಧಾನಿ ಲಿಝ್ ಟ್ರಸ್

ಲಂಡನ್, ಅ.18: ತೆರಿಗೆ ಸುಧಾರಣೆಗೆ ಸಂಬಂಧಿಸಿದ ಅವಸರದ ನಿರ್ಧಾರಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಬ್ರಿಟನ್ ಪ್ರಧಾನಿ ಲಿಝ್ ಟ್ರಸ್(Liz Truss), ತನ್ನ ಪ್ರಮಾದಗಳಿಗೆ ಕ್ಷಮೆ ಯಾಚಿಸಿದ್ದಾರೆ. ತನ್ನ ಒಂದು ತಿಂಗಳಾವಧಿಯ ನಾಯಕತ್ವ ಪರಿಪೂರ್ಣವಾಗಿಲ್ಲ, ಆದರೆ ಎಲ್ಲಿ ತಪ್ಪಾಗಿದೆ ಎಂಬುದನ್ನು ಅರಿತುಕೊಂಡಿರುವ ಕಾರಣ ಸುಧಾರಣೆಗೆ ಅವಕಾಶವಿದೆ ಎಂದವರು ಹೇಳಿದ್ದಾರೆ.
ದೇಶಕ್ಕೆ ಎದುರಾಗಿರುವ ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಗೆ ಮಾಧ್ಯಮದ ಟೀಕಾಪ್ರಹಾರಕ್ಕೆ ಗುರಿಯಾಗಿರುವ ಟ್ರಸ್, ಕಳೆದ ತಿಂಗಳು ಘೋಷಿಸಿದ ತೆರಿಗೆ ಸುಧಾರಣೆಯ ಕ್ರಮಗಳನ್ನು ಅವರ ಸರಕಾರ ಸೋಮವಾರ ರದ್ದುಗೊಳಿಸಿದೆ.
ಈ ದೇಶಕ್ಕೆ ಸೇವೆ ಸಲ್ಲಿಸಲು ನಾನು ಚುನಾಯಿತನಾಗಿರುವುದರಿಂದ ಕರ್ತವ್ಯದಿಂದ ವಿಮುಖನಾಗುವುದಿಲ್ಲ ಮತ್ತು ಸೇವೆ ಮುಂದುವರಿಸಲು ನಿರ್ಧರಿಸಿದ್ದೇನೆ. ತಪ್ಪನ್ನು ಅರಿತುಕೊಂಡು ಸಾಗುವ ಮಾರ್ಗವನ್ನು ಬದಲಾಯಿಸದಿರುವುದು ಬೇಜವಾಬ್ದಾರಿಯ ಕೃತ್ಯವಾಗಲಿದೆ. ಸಾಗುವ ದಿಕ್ಕನ್ನು ಬದಲಾಯಿಸಬೇಕು ಎಂದು ಅರಿತುಕೊಂಡ ಕಾರಣ ವಿತ್ತಸಚಿವರನ್ನು ಬದಲಾಯಿಸಲಾಗಿದೆ.
ನನ್ನ ದೃಷ್ಟಿಕೋನಕ್ಕೆ ಈಗಲೂ ಬದ್ಧಳಾಗಿದ್ದೇನೆ, ಆದರೆ ಹೊಸ ಕಾರ್ಯತಂತ್ರದೊಂದಿಗೆ ಮುಂದುವರಿಯಲಿದ್ದೇನೆ ಎಂದು ಟ್ರಸ್ ಹೇಳಿದ್ದಾರೆ. ಶುಕ್ರವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ನೂತನ ವಿತ್ತಸಚಿವ ಜೆರೆಮಿ ಹಂಟ್ (Jeremy Hunt)` ಮೂರು ವಾರಗಳ ಹಿಂದೆ ಬೆಳವಣಿಗೆಯ ಯೋಜನೆಯಲ್ಲಿ ಘೋಷಿಸಲಾದ ಬಹುತೇಕ ಎಲ್ಲಾ ತೆರಿಗೆ ಕ್ರಮಗಳನ್ನೂ ರದ್ದುಗೊಳಿಸಲು ಪ್ರಧಾನಮಂತ್ರಿ ಮತ್ತು ನಾನು ನಿನ್ನೆ ಒಪ್ಪಿಕೊಂಡೆವು' ಎಂದಿದ್ದರು. ಈ ನಿರ್ಧಾರವನ್ನು ಹೂಡಿಕೆದಾರರು ಸ್ವಾಗತಿಸಿದ್ದಾರೆ. ನಾಲ್ವರು ಸ್ವತಂತ್ರ ಸದಸ್ಯರನ್ನೂ ಒಳಗೊಂಡ ಆರ್ಥಿಕ ಸಲಹಾ ಸಮಿತಿಯನ್ನು ರಚಿಸುವುದಾಗಿಯೂ ಹಂಟ್ ಘೋಷಿಸಿದ್ದಾರೆ. ಎರಡು ಮುಜುಗುರದ ಬಜೆಟ್ ಯು-ಟರ್ನ್‍ನ ನಂತರ ಟ್ರಸ್ ರಾಜೀನಾಮೆಯ ಆಗ್ರಹಕ್ಕೆ ಈಗ ಪಕ್ಷದ ಕೆಲವು ಸಂಸದರೂ ಧ್ವನಿಗೂಡಿಸಿದ್ದಾರೆ.