ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ತನಿಖೆಯಲ್ಲಿ ಹಲವು ಅಕ್ರಮ: ಎನ್ಸಿಬಿ ಆಂತರಿಕ ತನಿಖೆಯಿಂದ ಬಯಲು
“ತನಿಖಾ ಏಜೆನ್ಸಿಯ ಏಳೆಂಟು ಅಧಿಕಾರಿಗಳಿಂದ ಅನುಮಾನಾಸ್ಪದ ವರ್ತನೆ”

photo: pti
ಮುಂಬೈ: ಬಾಲಿವುಡ್ ಸ್ಟಾರ್ ಶಾರುಖ್ ಖಾನ್ Shah Rukh Khan ಅವರ ಪುತ್ರ ಆರ್ಯನ್ ಖಾನ್ Aryan Khan ಅವರ ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಹಲವಾರು ಅಕ್ರಮಗಳು ನಡೆದಿದ್ದು, ತನಿಖಾ ಏಜೆನ್ಸಿಯ ಏಳೆಂಟು ಅಧಿಕಾರಿಗಳ ಕಡೆಯಿಂದ ಅನುಮಾನಾಸ್ಪದ ವರ್ತನೆ ಕಂಡುಬಂದಿರುವುದಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಆಂತರಿಕ ವರದಿ ಹೇಳಿದೆ ಎಂದು ndtv ವರದಿ ಮಾಡಿದೆ.
ಈ ವರದಿಯು ತನಿಖಾ ಏಜೆನ್ಸಿಗೆ ಎರಡನೇ ಬಾರಿಗೆ ಮುಜುಗರ ತಂದೊಡ್ಡಿದೆ. ಮೂರು ವಾರಗಳ ಜೈಲಿನಲ್ಲಿ ಕಳೆದ ನಂತರ, ಆರ್ಯನ್ ಖಾನ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಆರ್ಯನ್ ಹಾಗೂ ಇತರ ಐವರ ವಿರುದ್ಧ ಸಾಕಷ್ಟು ಪುರಾವೆಗಳನ್ನು ಹುಡುಕಲು ತಮಗೆ ಸಾಧ್ಯವಾಗಲಿಲ್ಲ ಎಂದು ಎನ್ಸಿಬಿ ಒಪ್ಪಿಕೊಂಡಿತ್ತು.
ಆರ್ಯನ್ ಖಾನ್ ಪ್ರಕರಣದ ನಿರ್ವಹಣೆಯಲ್ಲಿ ಅಧಿಕಾರಿಗಳು ನಡೆಸಿದ ಅವ್ಯವಹಾರದ ಆರೋಪಗಳ ಬಗ್ಗೆ ತನಿಖೆ ನಡೆಸಲು ಎನ್ಸಿಬಿ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) SIT ತನ್ನ ವಿಜಿಲೆನ್ಸ್ ವರದಿಯನ್ನು ದಿಲ್ಲಿಯಲ್ಲಿರುವ ತನ್ನ ಕೇಂದ್ರ ಕಚೇರಿಗೆ ಕಳುಹಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
"ತನಿಖೆಯಲ್ಲಿ ಹಲವು ಅಕ್ರಮಗಳು ನಡೆದಿರುವುದು ಕಂಡುಬಂದಿದೆ. ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಉದ್ದೇಶದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ" ಎಂದು ಮೂಲಗಳು ತಿಳಿಸಿವೆ.
ತನಿಖೆಯ ಭಾಗವಾಗಿ 65 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಕೆಲವರು ಮೂರ್ನಾಲ್ಕು ಬಾರಿ ಹೇಳಿಕೆ ಬದಲಾಯಿಸಿದ್ದಾರೆ. ವಿಚಾರಣೆಯು ಇತರ ಕೆಲವು ಪ್ರಕರಣಗಳ ತನಿಖೆಯಲ್ಲಿ ಲೋಪಗಳನ್ನು ಬಹಿರಂಗಪಡಿಸಿದೆ, ಈ ಎಲ್ಲಾ ಪ್ರಕರಣಗಳ ಬಗ್ಗೆ ವರದಿಗಳನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
"ಈ ಪ್ರಕರಣದಲ್ಲಿ 7 ರಿಂದ 8 ಎನ್ಸಿಬಿ ಅಧಿಕಾರಿಗಳ ಪಾತ್ರ ಅನುಮಾನಾಸ್ಪದವಾಗಿದ್ದು, ಇದಕ್ಕಾಗಿ ಇಲಾಖಾ ವಿಚಾರಣೆ ಆರಂಭಿಸಲಾಗಿದೆ. ಎನ್ಸಿಬಿ ಹೊರಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಂದ ಅನುಮತಿ ಕೋರಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







