ಸಂಸದರಾದ ನಳಿನ್, ಶೋಭಾರವರ ಕುಮ್ಮಕ್ಕಿನಿಂದ ಟೋಲ್ ತೆರವು ವಿಳಂಬ: ವಿನಯಕುಮಾರ್ ಸೊರಕೆ ಆರೋಪ
ಪಡುಬಿದ್ರಿ: ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್ ಕುಮಾರ್ ಅವರ ಕುಮ್ಮಕ್ಕಿನಿಂದ ಟೋಲ್‍ಗೇಟ್ ತೆರವು ವಿಳಂಬವಾಗುತ್ತಿದೆ. ಜನರಿಗೆ ಸಮಸ್ಯೆ ಆದರೂ ಪರವಾಗಿಲ್ಲ. ಟೋಲ್‍ಗೇಟ್ ತೆರವುಗೊಳಿಸುವುದಿಲ್ಲ ಎನ್ನುವಂತೆ ಇವರು ವರ್ತಿಸುತಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದರು.
ಅವರು ಮಂಗಳವಾರ ಸುರತ್ಕಲ್ ಟೋಲ್ ಮುತ್ತಿಗೆ ಹೋರಾಟಕ್ಕೂ ಮೊದಲು ಹೆಜಮಾಡಿ ಟೋಲ್ ಬಳಿ ಉಡುಪಿ ಜಿಲ್ಲೆಯ ಹೋರಾಟಗಾರರೊಂದಿಗೆ ತೆರಳುವ ಸಂದರ್ಭದಲ್ಲಿ ಮಾತನಾಡಿದರು.
ಹೆಜಮಾಡಿ ಟೋಲ್ ಕಾರ್ಯಾಚರಣೆಯ ಬಳಿಕ ಸುರತ್ಕಲ್ ಟೋಲ್ ತೆರವುಗೊಳಿಸುವುದಾಗಿ ಹೇಳಿ ಆರು ವರ್ಷವಾದರೂ ಇದುವರೆಗೆ ಟೋಲ್ ತೆರವುಗೊಳಿಸಲಿಲ್ಲ. ಈಗಾಗಲೇ ಸುರತ್ಕಲ್ ಟೋಲ್‍ನಲ್ಲಿ 400 ಕೋಟಿ ರೂ. ಸುಂಕ ವಸೂಲಿ ಮಡುತಿದ್ದಾರೆ. ಈ ಟೋಲ್‍ನಿಂದ ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿರುವುದು ಉಡುಪಿ ಜಿಲ್ಲೆಯ ಜನರು. ಹೆಜಮಾಡಿ ಹಾಗೂ ಸುರತ್ಕಲ್ ಟೋಲ್ ಕಟ್ಟುವುದರಿಂದ ಇಲ್ಲಿನ ಜನರಿಗೆ ಇದೊಂದು ಶಿಕ್ಷೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಲ್ಲಿಯೂ ಮೂಲಸೌಕರ್ಯಗಳು ಇಲ್ಲ. ಕೆಲವಡೆ ಇನ್ನೂ ಸರ್ವೀಸ್ ರಸ್ತೆ ಆಗಿಲ್ಲ ಎಂದರು.
ಸಾಸ್ತಾನದಲ್ಲಿ ಐದು ಕಿಮೀ ವ್ಯಾಪ್ತಿಯಲ್ಲಿ ರಿಯಾಯಿತಿ ನೀಡಲಾಗುತಿದೆ. ಆದರೆ ಹೆಜಮಾಡಿ ಟೋಲ್‍ನಲ್ಲಿ ಹೆಜಮಾಡಿ ಗ್ರಾಮ ಪಂಚಾಯಿತಿ ಹೊರತುಪಡಿಸಿ ಉಳಿದವರಿಗೆ ಇದುವರೆಗೆ ರಿಯಾಯಿತಿ ನೀಡುತಿಲ್ಲ. ಇಂತಹ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಬಿಸಿ ಮುಟ್ಟಸಬೇಕು ಎಂದು ಅವರು ಹೇಳಿದರು.