ಭಾರತ್ ಜೋಡೋಗೆ ಮಹಾರಾಷ್ಟ್ರದಲ್ಲಿ ಭರ್ಜರಿ ಬೆಂಬಲ ಸಾಧ್ಯತೆ: ಠಾಕ್ರೆ, ಪವಾರ್ ಪಾಲ್ಗೊಳ್ಳುವ ಸೂಚನೆ

ಮುಂಬೈ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅಥವಾ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಮುಂದಿನ ತಿಂಗಳು ಮಹಾರಾಷ್ಟ್ರಕ್ಕೆ ಪ್ರವೇಶಿಸಲಿರುವ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ಯಾತ್ರೆ’ಗೆ ಸೇರಲಿದ್ದಾರೆ ಎಂದು ThePrint ತಿಳಿಸಿದೆ.
ಭಾರತ್ ಜೋಡೋ ಯಾತ್ರೆ ಕುರಿತಂತೆ ಕಾಂಗ್ರೆಸ್ ಪಕ್ಷದ ನಿಯೋಗವೊಂದು ಠಾಕ್ರೆ ಅವರನ್ನು ಅವರ ಮುಂಬೈ ನಿವಾಸದ ಮಾತೋಶ್ರೀಯಲ್ಲಿ ಭೇಟಿ ಮಾಡಿತ್ತು. ಅದರ ಒಂದು ದಿನದ ಬೆನ್ನಲ್ಲೇ ಯಾತ್ರೆಗೆ ಶಿವಸೇನೆ ಸೇರಲಿದೆ ಎಂಬ ದೃಢೀಕರಣವು ಬಂದಿದೆ. ನವೆಂಬರ್ 6 ರಂದು ಮಹಾರಾಷ್ಟ್ರದಲ್ಲಿ ಯಾತ್ರೆ ಪ್ರಾರಂಭವಾಗುತ್ತದೆ.
ಕಾಂಗ್ರೆಸ್ ಮಹಾರಾಷ್ಟ್ರ ಉಸ್ತುವಾರಿ ಎಚ್‌ಕೆ ಪಾಟೀಲ್ ನೇತೃತ್ವದ ನಿಯೋಗ ಮತ್ತು ಪಕ್ಷದ ಹಿರಿಯ ನಾಯಕರಾದ ಬಾಳಾಸಾಹೇಬ್ ಥೋರಟ್ ಮತ್ತು ಅಶೋಕ್ ಚವಾಣ್ ಅವರ ನೇತೃತ್ವದ ನಿಯೋಗವು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಕೂಡಾ ಭಾರತ್ ಜೋಡೋಗೆ ಜೊತೆಯಾಗಲು ಆಹ್ವಾನಿಸಿದೆ.
ತಾನು ಮತ್ತು ತನ್ನ ಮಗ ಇಬ್ಬರೂ ಯಾತ್ರೆಗೆ ಬರಲು ಸಾಧ್ಯವಾಗದಿದ್ದರೆ, ತಮ್ಮಲ್ಲಿ ಯಾರಾದರೂ ಒಬ್ಬರು ಯಾತ್ರೆಗೆ ಜೊತೆಯಾಗಿ ಶಿವಸೇನೆಯ ಉಪಸ್ಥಿತಿಯನ್ನು ತೋರಿಸುವುದಾಗಿ ಠಾಕ್ರೆ ಕಾಂಗ್ರೆಸ್ ಗೆ ತಿಳಿಸಿರುವುದಾಗಿ ಮೂಲವೊಂದು ತಿಳಿಸಿದೆ. ಪವಾರ್ ತಾನು ಹಾಗೂ ತಮ್ಮ ಪುತ್ರಿ ಸುಪ್ರಿಯಾ ಸುಳೆ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿದ್ದಾರೆ ಮತ್ತು ಅದರಲ್ಲಿ ನಮ್ಮೊಂದಿಗೆ ಸೇರಲು ನಾವು ನಮ್ಮ ಪಾಲುದಾರರು ಮತ್ತು ಸ್ನೇಹಿತರನ್ನು ಆಹ್ವಾನಿಸುತ್ತಿದ್ದೇವೆ" ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ThePrint ಗೆ ತಿಳಿಸಿದ್ದಾರೆ.







