'ಸನ್ನಡತೆ' ಆಧಾರದಲ್ಲಿ ಬಿಡುಗಡೆಯಾದ ಅಪರಾಧಿಗಳ ವಿರುದ್ಧ ಸಾಕ್ಷಿಗಳನ್ನು ಬೆದರಿಸಿದ್ದ ಹಲವು ಪ್ರಕರಣಗಳಿದ್ದವು !
ಬಿಲ್ಕಿಸ್ ಬಾನು ಪ್ರಕರಣ

ಹೊಸದಿಲ್ಲಿ: ಗುಜರಾತ್‍ನಲ್ಲಿ 2002 ರಲ್ಲಿ ನಡೆದ ಗಲಭೆಗಳ ಸಂದರ್ಭ ನಡೆದಿದ್ದ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳನ್ನು ಅವರ ಶಿಕ್ಷೆಯ ಅವಧಿ ಮುಗಿಯುವ ಮುನ್ನವೇ ಬಿಡುಗಡೆಗೊಳಿಸಿರುವುದನ್ನು ಸಮರ್ಥಿಸಿದ್ದ ಗುಜರಾತ್ ಸರಕಾರ ಅವರ ಸನ್ನಡತೆಯನ್ನು ಗಣನೆಗೆ ತೆಗೆದುಕೊಂಡು ಹಾಗೂ ಕೇಂದ್ರ ಸರಕಾರದ ಒಪ್ಪಿಗೆ ಮೇರೆಗೆ ಬಿಡುಗಡೆಗೊಳಿಸಲಾಗಿತ್ತು ಎಂದು ಹೇಳಿತ್ತು.
ಆದರೆ ಗುಜರಾತ್ ಸರಕಾರದ `ಸನ್ನಡತೆ' ಕಾರಣ ಈಗ ಸುಳ್ಳೆಂದು ತಿಳಿದು ಬರುತ್ತಿದೆ. ಅವರ ಅವಧಿಪೂರ್ವ ಬಿಡುಗಡೆಗೆ ಮುನ್ನ ಸಾವಿರಾದು ದಿನಗಳ ಕಾಲ ಹಲವು ಬಾರಿ ಪೆರೋಲ್ ಮೇಲೆ ಬಿಡುಗಡೆಗೊಂಡಿದ್ದಾಗ ಅವರ ವಿರುದ್ಧ ದಾಖಲಾಗಿದ್ದ ಕಿರುಕುಳ ಪ್ರಕರಣಗಳು ಅವರ `ಸನ್ನಡತೆ'ಯನ್ನು ಪ್ರಶ್ನಿಸುವಂತೆ ಮಾಡಿವೆ ಎಂದು ndtv.com ವರದಿ ಮಾಡಿದೆ.
ಪೆರೋಲ್ ಮೇಲಿರುವಾಗ ಅವರ ವಿರುದ್ಧ ಸಾಕ್ಷಿಗಳಿಗೆ ಬೆದರಿಸಿ ಕಿರುಕುಳ ನೀಡಿದ್ದಾರೆಂದು ಆರೋಪಿ ಸಲ್ಲಿಸಲಾಗಿದ್ದ ದೂರುಗಳ ಆಧಾರದಲ್ಲಿ ದಾಖಲಾಗಿದ್ದ ಎಫ್‍ಐಆರ್‍ಗಳ ಪ್ರತಿ ದೊರಕಿದೆ ಎಂದು ಎನ್‍ಡಿಟಿವಿ ಹೇಳಿಕೊಂಡಿದೆ.
2017-2021 ನಡುವೆ ಈ ಪ್ರಕರಣದ ಕನಿಷ್ಠ ನಾಲ್ಕು ಮಂದಿ ಸಾಕ್ಷಿಗಳು ಅಪರಾಧಿಗಳ ವಿರುದ್ಧ ದೂರು, ಎಫ್‍ಐಆರ್ ದಾಖಲಿಸಿದ್ದರು ಎಂದು ತಿಳಿದು ಬಂದಿದೆ. ಒಂದು ಎಫ್‍ಐಆರ್ ಹಾಗೂ ಎರಡು ಪೊಲೀಸ್ ದೂರುಗಳ ಮಾಹಿತಿ ಲಭ್ಯವಾಗಿದೆ ಎಂದು ಎನ್‍ಡಿಟಿವಿ ಹೇಳಿದೆ.
ಜುಲೈ 6, 2020 ದಿನಾಂಕದ ಎಫ್‍ಐಆರ್‍ನಲ್ಲಿ ಅಪರಾಧಿಗಳಾದ ರಾಧೇಶ್ಯಾಮ್ ಶಾ ಮತ್ತು ಮಿತೇಶ್‍ಭಾಯಿ ಭಟ್ಟ್ ಹೆಸರುಗಳಿವೆ. ಸಬೇರಾಬೆನ್ ಪಟೇಲ್ ಮತ್ತು ಸಾಕ್ಷಿ ಪಿಂಟುಭಾಯಿ ಎಂಬವರು ದಹೋದ್ ಠಾಣೆಯಲ್ಲಿ ದಾಖಲಿಸಿದ್ದ ದೂರಿನ ಆಧಾರದಲ್ಲಿ ಅವರಿಬ್ಬರ ಮೇಲೆ ಸೆಕ್ಷನ್ 354, 506 (2), 114 ಅನ್ವಯ ಪ್ರಕರಣ ದಾಖಲಾಗಿತ್ತು.
ಇಬ್ಬರು ಅಪರಾಧಿಗಳು ಹಾಗೂ ರಾಧೇಶ್ಯಾಮ್ ಸೋದರ ಆಶಿಷ್ ಸಬೇರಾಬೆನ್, ಆಕೆಯ ಪುತ್ರಿ ಅರ್ಫಾ ಮತ್ತು ಸಾಕ್ಷಿ ಪಿಂಟುಭಾಯಿ ಅವರನ್ನು ಬೆದರಿಸಿದ್ದರೆಂದು ದೂರಲಾಗಿದೆ.
ಇನ್ನೊಬ್ಬ ಸಾಕ್ಷಿ ಮನ್ಸೂರಿ ಅಬ್ದುಲ್ ರಝಾಖ್ ಅಬ್ದುಲ್ ಮಜೀದ್ ಕೂಡ ಜನವರಿ 1, 2021 ರಂದು ಸೈಲೇಶ್ ಚಿಮ್ಮನ್‍ಲಾಲ್ ಭಟ್ಟ್ ಎಂಬಾತನ ವಿರುದ್ಧ ಬೆದರಿಕೆ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಲಿಮ್ಖೇಡ ಶಾಸಕ ಸೈಲೇಶ್ ಭಾಯಿ ಭಭೋರ್ ಮತ್ತು ಮಾಜಿ ಸಚಿವ ಮತ್ತು ಸಂಸದ ಜಸ್ವಂತ್‍ಸಿಂಗ್ ಭಭೋರ್ ಸೈಲೇಶ್ ನ ಒಳ್ಳೆಯ ಕಾರ್ಯ ಪ್ರಶಂಸಿಸಿ ಸನ್ಮಾನಿಸಿದ್ದರೆಂದೂ ಆರೋಪಿಸಲಾಗಿದ್ದು ಈ ಕುರಿತಾದ ಫೋಟೋ ಕೂಡ ದೂರಿನೊಂದಿಗೆ ಲಗತ್ತಿಸಲಾಗಿದೆ. ಆದರೆ ಈ ಕುರಿತು ಎಫ್‍ಐಆರ್ ದಾಖಲಾಗಿಲ್ಲ.
ಇನ್ನೂ ಇಬ್ಬರು ಸಾಕ್ಷಿಗಳಾದ ಘಂಚಿ ಆದಂಭಾಯಿ ಇಸ್ಮಾಯಿಲ್‍ಭಾಯಿ ಮತ್ತು ಘಂಚಿ ಇಮ್ತಿಯಾಝ್‍ಭಾಯಿ ಯೂಸುಫ್‍ಬಾಯಿ ಅವರು ಜುಲೈ 28, 2017 ರಂದು ಅಪರಾಧಿ ಗೋವಿಂದ್ ನೈ ವಿರುದ್ಧ ದೂರು ಸಲ್ಲಿಸಿ ರಾಜಿ ಪಂಚಾತಿಕೆಗೆ ಒಪ್ಪದೇ ಇದ್ದರೆ ಕೊಲ್ಲುವುದಾಗಿ ಬೆದರಿಸಿದ್ದ ಎಂದು ಆರೋಪಿಸಿದ್ದರು. ಈ ಕುರಿತು ಕೂಡ ಎಫ್‍ಐಆರ್ ದಾಖಲಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.







