ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ದಿನಕ್ಕೆ 2 ಗಂಟೆ ಮಾತ್ರ ಅವಕಾಶ: ಸುತ್ತೋಲೆ

ಬೆಂಗಳೂರು, ಅ.19: ದೀಪಾವಳಿ ಹಬ್ಬ ಹಿನ್ನೆಲೆ ನಗರದಲ್ಲಿ ಪ್ರತಿದಿನ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ.
ಶಬ್ದ ಮಾಲಿನ್ಯವನ್ನು ಹೆಚ್ಚಿಸುವ ಪಟಾಕಿಗಳನ್ನು ನಿಷೇಧಿಸಲಾಗಿದ್ದು, ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ರಾತ್ರಿಯಿಡೀ ಬೇಕಾಬಿಟ್ಟಿ ಪಟಾಕಿಗಳನ್ನು ಸಿಡಿಸುವಂತಿಲ್ಲ ಎಂದೂ ಉಲ್ಲೇಖಿಸಲಾಗಿದೆ.
ಅದೇ ರೀತಿ, ಹಬ್ಬದ ಮುನ್ನ ಮತ್ತು ನಂತರದ ಎಲ್ಲ್ಲ ಏಳು ದಿನಗಳಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ಅಳೆಯಲು ಎಲ್ಲ ಜಿಲ್ಲೆಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.
ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕೆಂಬ ನಿಯಮ ಕೂಡ ಜಾರಿಯಲ್ಲಿದ್ದು, ತಪ್ಪಿದಲ್ಲಿ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಮಾಲಿನ್ಯವನ್ನು ಅಳೆಯಲು ಬೆಂಗಳೂರು ನಗರ ಮತ್ತು ಜಿಲ್ಲೆಗಳಾದ್ಯಂತ ಸಾಧನಗಳನ್ನು ಅಳವಡಿಸಲಾಗಿದೆ. ಅ.31 ರವರೆಗೆ ದಾಖಲಾಗುವ ವಾಯು ಮತ್ತು ಶಬ್ದ ಮಾಲಿನ್ಯ ವರದಿಯನ್ನು ನ.5 ರೊಳಗೆ ಕಳುಹಿಸಬೇಕು ಎಂದು ಸುತ್ತೋಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪಟಾಕಿ ಸಿಡಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸೂಚಿಸಿದೆ.







