ಮಂಗಳೂರು: ನಿತಿನ್ ವಾಸ್ ತಂಡದಿಂದ ಸಿದ್ಧಗೊಂಡಿದೆ ಪರಿಸರ ಸ್ನೇಹಿ ಪಟಾಕಿ
► ದೀಪಾವಳಿ ಸಡಗರಕ್ಕೆ ವಿಭಿನ್ನ ಪಟಾಕಿ ► ಇದು ಸಿಡಿಯುವುದಿಲ್ಲ, ಗಿಡವಾಗಿ ಬೆಳೆಯುವುದು

ಮಂಗಳೂರು, ಅ. 19: ದೀಪಾವಳಿ ಹಬ್ಬದಲ್ಲಿ ದೀಪಗಳ ಜತೆಗೆ ಪಟಾಕಿಗೂ ಪ್ರಮುಖ ಸ್ಥಾನವಿದೆ. ಆದರೆ ಪಟಾಕಿಗಳು ಶಬ್ಧ ಮಾಲಿನ್ಯದ ಜತೆಗೆ ವಾಯು ಮಾಲಿನ್ಯಕ್ಕೂ ಕಾರಣವಾಗುತ್ತಿರುವುದರಿಂದ ಕಡಿಮೆ ಶಬ್ಧ, ವಾಯು ಮಾಲಿನ್ಯದ ಪಟಾಕಿಗಳನ್ನೇ ಇತ್ತೀಚೆಗೆ ಜನಸಾಮಾನ್ಯರು ಇಷ್ಟ ಪಡುತ್ತಾರೆ. ಈ ನಡುವೆ, ಮಂಗಳೂರಿನ ಪರಿಸರ ಪ್ರೇಮಿ ನಿತಿನ್ ವಾಸ್ ಈ ಬಾರಿ ವಿಶೇಷ ರೀತಿಯ ಪಟಾಕಿಗಳನ್ನು ತಯಾರಿಗೊಳಿಸುತ್ತಿದ್ದಾರೆ.
ಇದು ಸದ್ದು ಮಾಡುವುದಿಲ್ಲ, ಸಿಡಿಯುವುದಿಲ್ಲ, ಪರಿಸರ ಮಾಲಿನ್ಯವನ್ನಂತು ಮಾಡುವುದೇ ಇಲ್ಲ. ಬದಲಿಗೆ ಈ ಪಟಾಕಿಗಳನ್ನು ಹೂವಿನ ಕುಂಡ, ನೆಲಕ್ಕೆ ಹಾಕಿದರೆ ಅವುಗಳು ಗಿಡವಾಗಿ ಬೆಳೆಯುತ್ತವೆ. ಈ ಪಟಾಕಿ ಒಳಗಿರುವ ಬೀಜಗಳು ಮಣ್ಣಲ್ಲಿ ಸೇರಿ ಮೊಳಕೆಯೊಡೆದು ತರಕಾರಿ, ಹಣ್ಣಿನ ಗಿಡಗಳಾಗಿ ಪರಿಸರ ಸ್ನೇಹಿಯಾಗಿ ಜೀವ ಪಡೆಯಬಲ್ಲವು. ಪಟಾಕಿಗಳು ಒಮ್ಮೆ ಉರಿಸಿದ ಬಳಿಕ ಬೂದಿಯಾಗಿ ಬಿಡುತ್ತವೆ. ಆದರೆ ಈ ಪಟಾಕಿಗಳು ಹಾಗಲ್ಲ. ಮಣ್ಣಿಗೆ ಸೇರಿ ಗಿಡಗಳಾಗಿ, ನಮ್ಮ ಜತೆ ತಿಂಗಳುಗಳ ಕಾಲ ಇರಬಲ್ಲವು.
ಮಂಗಳೂರಿನ ಪಕ್ಷಿಕೆರೆಯಲ್ಲಿ ಪೇಪರ್ ಸೀಡ್ಸ್ ಸಂಸ್ಥೆ ಮೂಲಕ ಚಿರ ಪರಿಚಿತರಾಗಿರುವ ನಿತಿನ್ ವಾಸ್ ತಂಡ ಈ ಬಾರಿ ದೀಪಾವಳಿಗೆ ಈ ಪರಿಸರ ಸ್ನೇಹಿ ಪಟಾಕಿಗಳನ್ನು ತಯಾರಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಪಟಾಕಿಗಳ ತಯಾರಿ ಕಾರ್ಯ ನಡೆದಿದೆ.
ನಿತಿನ್ ವಾಸ್ ಅವರ ತಂಡ ತಯಾರಿಸುತ್ತಿರುವ ಈ ವಿನತೂನ ಪಟಾಕಿಗಳ ಪ್ಯಾಕ್ ಸುಡುಮದ್ದುಗಳಿಂದ ಕೂಡಿದ ಪಟಾಕಿಗಳನ್ನೇ ಹೋಲುತ್ತವೆ. ಬೀಡಿ ಪಟಾಕಿಯಲ್ಲಿ ಮೆಣಸು, ಟೊಮೆಟೋ, ಪಾಲಕ್, ಲಕ್ಷ್ಮೀ ಬಾಂಬ್‌ನಲ್ಲಿ ಬೀಟ್ರೋಟ್, ಸನ್ ಫ್ಲವರ್ ಸೌತೆಕಾಯಿ, ಸುಕ್ಲಿ ಬಾಂಬ್‌ನಲ್ಲಿ ಮೆಣಸಿನಕಾಯಿ, ಟೊಮೊಟೋ, ಮೂಲಂಗಿ, ರಾಕೆಟ್‌ನಲ್ಲಿ ಬೀಟ್ರೋಟ್, ಸನ್‌ಫ್ಲವರ್, ಮಳೆ (ದುರ್ಸು) ಪಟಾಕಿಯಲ್ಲಿ ಸೌತೆ, ಬೆಂಡೆಕಾಯಿ, ನೆಲಚಕ್ರದಲ್ಲಿ ಪಾಲಕ್, ಮೂಲಂಗಿ ಬೀಜಗಳನ್ನು ಹಾಕಿ ಪಟಾಕಿ ರೂಪ ನೀಡಲಾಗಿದೆ.
ನಿತಿನ್ ವಾಸ್ ನೇತೃತ್ವದ 30 ಜನರ ತಂಡ ಈ ಪಟಾಕಿಗಳನ್ನು ತಯಾರಿಸುವ ಕೆಲಸ ಮಾಡುತ್ತಿದೆ. ಆ ಮೂಲಕ ಉದ್ಯೋಗವನ್ನೂ ಸೃಷ್ಟಿಸಲಾಗಿದೆ. ಆರು ಬಗೆಯ ಈ ಪರಿಸರ ಸ್ನೇಹಿ ಪಟಾಕಿಗಳನ್ನು ಒಂದು ಬಾಕ್ಸ್ ಮಾಡಿ ಮಾರಾಟಕ್ಕೆ ತಯಾರು ಮಾಡಲಾಗುತ್ತಿದೆ.
‘‘ಹೊಸ ಪರಿಕಲ್ಪನೆಯೊಂದಿಗೆ ಈ ಬಾರಿ ಪರಿಸರ ಸ್ನೇಹಿ ಪಟಾಕಿಗಳನ್ನು ತಯಾರಿಸಲಾಗಿದೆ. ಹಬ್ಬಗಳ ಸಡಗರದಲ್ಲಿ ಪಟಾಕಿಗಳ ಜತೆಗೆ ಈ ಪರಿಸರ ಸ್ನೇಹಿ ಪಟಾಕಿಗಳು ಪರಿಸರ ಸಂರಕ್ಷಣೆಗೆ ಪೂರಕವಾಗಬಲ್ಲದು ಎಂಬ ಆಶಾವಾದದೊಂದಿಗೆ ಸುಮಾರು 30 ಮಂದಿ ಸೇರಿ ಪಟಾಕಿಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಆರು ಬಗೆಯ ತಲಾ 2ರಂದೆ 12 ಪಟಾಕಿಗಳನ್ನು ಹಾಕಿ ಪ್ಯಾಕೆಟ್ ತಯಾರಿಸಲಾಗಿದೆ’’ ಎನ್ನುತ್ತಾರೆ ಪರಿಸರ ಪ್ರೇಮಿ ನಿತಿನ್ ವಾಸ್.