ಸಿಐಟಿಯು 15ನೆ ರಾಜ್ಯ ಸಮ್ಮೇಳನದ ಪ್ರಚಾರ ಜಾಥ ಉದ್ಘಾಟನೆ

ಕುಂದಾಪುರ : ಕಾರ್ಮಿಕರ ಐಕ್ಯತೆ -ಜನತೆಯ ಸೌಹಾರ್ದತೆಗೆ ಸಿಐಟಿಯು 15ನೆ ರಾಜ್ಯ ಸಮ್ಮೇಳನದ ಜಿಲ್ಲಾ ಮಟ್ಟದ ಪ್ರಚಾರ ಜಾಥ ಇಂದು ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಉದ್ಘಾಟನೆಗೊಂಡಿತು.
ಜಾಥಾವನ್ನು ಉದ್ಘಾಟಿಸಿದ ಸಿಐಟಿಯು ೧೫ನೇ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಶಂಕರ್ ಮಾತನಾಡಿ, ಬೆಲೆ ಏರಿಕೆ, ನಿರುದ್ಯೋಗ,ಜನರ ಆದಾಯ ಕುಸಿತವು ಬಾರಿ ದುಷ್ಪರಿಣಾಮ ಬೀರುತ್ತಿದೆ. ಕಾರ್ಮಿಕ ಕಾನೂನು ತಿದ್ದುಪಡಿಯಿಂದ ಕೋಟ್ಯಂತರ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ರೈಲು, ವಿದ್ಯುತ್, ವಿಮಾನ, ವಿಮೆ ಮುಂತಾದ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಮಧ್ಯಮ, ಬಡ ವರ್ಗದರ ಮೇಲೆ ವ್ಯಾಪಕ ದಾಳಿ ನಡೆಸಲಾಗುತ್ತಿದೆ. ಇದರ ವಿರುದ್ಧ ಚರ್ಚೆ ನಡೆಸಿ ಮುಂದಿನ ಹೋರಾಟಗಳನ್ನು ರೂಪಿಸಲು ನ.೧೫-೧೭ರಂದು ಕುಂದಾಪುರದ ನಗರದಲ್ಲಿ ರಾಜ್ಯ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಾಥಾದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕೋಶಾಧಿಕಾರಿ ಎಚ್.ನರಸಿಂಹ, ಮಹಾಬಲ ವಡೇರಹೋಬಳಿ, ಪ್ರಚಾರ ಸಮಿತಿ ಸಂಚಾಲಕ ಚಂದ್ರಶೇಖರ ವಿ., ವೆಂಕಟೇಶ್ ಕೋಣಿ, ನಾಗರತ್ನ ನಾಡ, ಶೀಲಾವತಿ, ಬೀಡಿ ಸಂಘಟನೆಯ ಮುಖಂಡರಾದ ಬಲ್ಕೀಸ್ ಉಪಸ್ಥಿತರಿದ್ದರು.





