ಇಂದ್ರಾಳಿ ರಸ್ತೆ ದುರಸ್ತಿ; ಬದಲಿ ಮಾರ್ಗ ಬಳಕೆಗೆ ಸೂಚನೆ

ಉಡುಪಿ, ಅ.19: ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ 76.040 ಕಿ.ಮೀ.ನಿಂದ 85.200ಕಿ.ಮೀವರೆಗೆ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಬಾಕಿ ಇರುವ ಚತುಷ್ಪಥ ಕಾಂಕ್ರೀಟೀಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು ಇದರಿಂದ ವಾಹನಗಳ ಸಂಚಾರಕ್ಕೆ ಭಾರೀ ಅಡಚಣೆಯಾಗುತ್ತಿದೆ.
ಈಗಾಗಲೇ ಇಂದ್ರಾಳಿ ರೈಲ್ವೆ ಸೇತುವ ಮೂಲಕ ಭಾರೀ ವಾಹನ ಸಂಚಾರ ವನ್ನು ಕಡ್ಡಾಯವಾಗಿ ನಿರ್ಬಂದಿಸಿದ್ದು, ವಾಹನಗಳ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಉಳಿದ ವಾಹನಗಳಿಗೆ ಅಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಇತರ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ಕುಂದಾಪುರ ಕಡೆಯಿಂದ ಬರುವ ಘನವಾಹನಗಳು ಅಂಬಾಗಿಲು- ಪೆರಂಪಳ್ಳಿ- ಮಣಿಪಾಲ ರಸ್ತೆಯ ಮೂಲಕ ಚಲಿಸಬೇಕು. ಉಡುಪಿಯಿಂದ ಬರುವ ಘನ ವಾಹನಗಳು ಕಲ್ಸಂಕ ಜಂಕ್ಷನ್ ಬಳಿ ಎಡ ತಿರುವು ಪಡೆದು ಗುಂಡಿ ಬೈಲಿ ರಸ್ತೆ ಮೂಲಕ ಎ.ವಿ.ಬಾಳಿಗ ಆಸ್ಪತ್ರೆ ಬಳಿಯಿಂದ ಪೆರಂಪಳ್ಳಿ ರಸ್ತೆಯ ಮೂಲಕ ಮಣಿಪಾಲಕ್ಕೆ ಚಲಿಸಬೇಕು.
ಕಾರ್ಕಳ, ಹಿರಿಯಡ್ಕದಿಂದ ಬರುವ ಘನ ವಾಹನಗಳು ಮಣಿಪಾಲ- ಪೆರಂಪಳ್ಳಿ- ಅಂಬಾಗಿಲು ರಸ್ತೆಯ ಮೂಲಕ ಚಲಿಸಬೇಕು. ಉಡುಪಿಯಿಂದ ಮಣಿಪಾಲಕ್ಕೆ ಚಲಿಸುವ ದ್ವಿಚಕ್ರ ವಾಹನ, ಕಾರುಗಳು ಮತ್ತು ಬಸ್ಸುಗಳು ಹಾಲಿ ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿಬರ್ಂಧಿತ ರೀತಿಯಲ್ಲಿ ಚಲಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.







