ಚಿಕ್ಕಮಗಳೂರು: ಶಾಲೆಯಲ್ಲಿ ಕುಕ್ಕರ್ ಸಿಡಿದು ಬಾಲಕಿ ಗಂಭೀರ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಅ.19: ಕುಕ್ಕರ್ ಸಿಡಿದು ಶಾಲಾ ಬಾಲಕಿಯೊರ್ವಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಕೋಡು ಗ್ರಾಮದಲ್ಲಿ ವರದಿಯಾಗಿದೆ.
ಬ್ಯಾರವಳ್ಳಿ ಗ್ರಾಮದ ಶಾಲಾ ಬಾಲಕಿ ಮಾಕೋಡು ಗ್ರಾಮದ ಸರಕಾರಿ ಶಾಲೆಗೆ ವ್ಯಾಸಂಗಕ್ಕೆ ಬರುತ್ತಿದ್ದು, ಬುಧವಾರ ಮಧ್ಯಾಹ್ನ ಶಾಲೆಯ ಅಡುಗೆ ಸಿಬ್ಬಂದಿ ಕುಕ್ಕರ್ ನಲ್ಲಿ ಅಡುಗೆ ಮಾಡಿಟ್ಟಿದ್ದರು. ಈ ವೇಳೆ ಶಾಲಾ ಶಿಕ್ಷಕರೊಬ್ಬರು 4ನೇ ತರಗತಿಯ ಶಾಲಾ ಬಾಲಕಿಯನ್ನು ಕುಕ್ಕರ್ ನಲ್ಲಿರುವ ಅಡುಗೆ ಬಡಿಸಿಕೊಂಡು ಊಟ ಮಾಡಲು ಹೇಳಿದ್ದಾರೆನ್ನಲಾಗಿದೆ. ಅಡುಗೆ ಕೋಣೆಗೆ ಹೋದ ಶಾಲಾ ಬಾಲಕಿ ಏಕಾಏಕಿ ಕುಕ್ಕರ್ ಮುಚ್ಚಳ ತೆಗೆಯಲು ಮುಂದಾಗಿದ್ದರಿಂದ ಕುಕ್ಕರ್ ದಿಢೀರ್ ಸಿಡಿದಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದಾಗಿ ಶಾಲಾ ಬಾಲಕಿ ಮುಖಕ್ಕೆ ಗಂಭೀರ ಗಾಯವಾಗಿದ್ದು, ಕೂಡಲೇ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ಶಿಕ್ಷಕನ ಬೇಜವಬ್ದಾರಿಯೇ ಬಾಲಕಿಯ ಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದು, ಶಿಕ್ಷಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಬಾಲಕಿ ಪೋಷಕರು ಒತ್ತಾಯಿಸಿದ್ದಾರೆ.