ಮ್ಯಾನ್ಮಾರ್: ಜೈಲಿನ ಹೊರಗೆ ಬಾಂಬ್ ಸ್ಫೋಟ 8 ಮಂದಿ ಮೃತ್ಯು; 18 ಮಂದಿಗೆ ಗಾಯ (ನೋಶೇರ್) ಯಾಂಗಾನ್, ಅ.19: ಮ್ಯಾನ್ಮಾರ್

ಯಾಂಗಾನ್, ಅ.19: ಮ್ಯಾನ್ಮಾರ್(Myanmar) ನ ಪ್ರಮುಖ ವಾಣಿಜ್ಯ ಕೇಂದ್ರ ಯಾಂಗಾನ್ (Yangon)ಜೈಲಿನ ಹೊರಗೆ ಬುಧವಾರ ಬಾಂಬ್ ಸ್ಫೋಟಿಸಿದ್ದು ಕನಿಷ್ಟ 8 ಮಂದಿ ಮೃತಪಟ್ಟಿದ್ದಾರೆ. ಇತರ 18 ಮಂದಿ ಗಾಯಗೊಂಡಿದ್ದಾರೆ ಎಂದು ಸೇನಾಡಳಿತ ಹೇಳಿದೆ.
ರಾಜಕೀಯ ಕೈದಿಗಳನ್ನು ಇರಿಸಿರುವ ಇನ್ಸೀನ್ ಜೈಲಿನ ಕೈದಿಗಳಿಗೆ ಪಾರ್ಸೆಲ್ ತಲುಪಿಸಲು ಕೈದಿಗಳ ಕುಟುಂಬದವರು ಸರತಿ ಸಾಲಿನಲ್ಲಿ ನಿಂತಿದ್ದ ಸಂದರ್ಭ 2 ಬಾಂಬ್ ಸ್ಫೋಟಗೊಂಡಿದೆ. ಜೈಲಿನ 3 ಸಿಬಂದಿ, 10 ವರ್ಷದ ಬಾಲಕಿ ಸಹಿತ 8 ಮಂದಿ ಮೃತಪಟ್ಟಿದ್ದು ಪಾರ್ಸೆಲ್ನಲ್ಲಿ ಇದ್ದ ಮತ್ತೊಂದು ಬಾಂಬ್ ಸ್ಫೋಟಗೊಳ್ಳದ ಕಾರಣ ಇನ್ನಷ್ಟು ಸಾವುನೋವು ಸಂಭವಿಸಿಲ್ಲ. ಸ್ಫೋಟದ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ. ಆದರೆ ಇದೊಂದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Next Story