ಕಾಫಿ ಎಸ್ಟೇಟ್ ಮಾಲಕನ ಹಲ್ಲೆಯಿಂದಲೇ ಗರ್ಭಪಾತವಾಗಿದೆ: ಸಂತ್ರಸ್ತೆಯ ಅಳಲು
''ಪ್ರಕರಣವನ್ನು ತಿರುಚುವ ಹುನ್ನಾರ ನಡೆದಿದೆ'' ► ಕಾರ್ಮಿಕರನ್ನು ಕೋಣೆಯೊಳಗೆ ಕೂಡಿ ಹಾಕಿ ದೌರ್ಜನ್ಯ ಪ್ರಕರಣ
ಚಿಕ್ಕಮಗಳೂರು, ಅ.19: 'ಕಾಫಿತೋಟದ ಮಾಲಕ ಜಗದೀಶ್ ಗೌಡ ಮತ್ತು ಆತನ ಮಗ ತಿಲಕ್‍ಗೌಡ ಅವರಿಂದ ನಮಗೆ ಅನ್ಯಾಯವಾಗಿದೆ. ನಮಗೆ ನ್ಯಾಯಬೇಕು' ಎಂದು ಎಸ್ಟೇಟ್ ಮಾಲಕನ ಹಲ್ಲೆಯಿಂದ ಗರ್ಭಪಾತಕ್ಕೆ ಒಳಗಾದ ಕಾರ್ಮಿಕ ಯುವತಿ ಅಳಲು ತೋಡಿಕೊಂಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಾನು ಎರಡೂವರೆ ತಿಂಗಳ ಗರ್ಭಿಣಿಯಾಗಿದ್ದು, ಘಟನೆ ನಡೆದ ದಿನ ಜಗದೀಶ್‍ಗೌಡ ನಮ್ಮ ಮೇಲೆ ಹಲ್ಲೆ ಮಾಡಿದ ಘಟನೆಯನ್ನು ನನ್ನ ಮೊಬೈಲ್‍ನಲ್ಲಿ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದೆ. ಈ ವೇಳೆ ಮಾಲಕ ಜಗದೀಶ್‍ಗೌಡ ಮತ್ತು ಆತನ ಮಗ ತಿಲಕ್‍ಗೌಡ ನನ್ನ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡರು. ನಂತರ ಕೋಣೆಯಲ್ಲಿ ಕೂಡಿ ಹಾಕಿ ಅಲ್ಲಿ ನನ್ನ ಹೊಟ್ಟೆಗೆ ಒದ್ದ ಪರಿಣಾಮ ನನಗೆ ಹೊಟ್ಟೆ ನೋವು ಬಂದು ರಕ್ತಸ್ರಾವ ಆಗಿದೆ. ನಂತರ ಕಡಬಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದಿದ್ದೇನೆ. ಅಲ್ಲಿನ ವೈದ್ಯರು ಸ್ಕ್ಯಾನಿಂಗ್ ಮಾಡಲು ಹೇಳಿದ್ದರಿಂದ ಮೂಡಿಗೆರೆ ಹಾಗೂ ಚಿಕ್ಕಮಗಳೂರು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿದ್ದು, ಈ ವೇಳೆ ವೈದ್ಯರು ಗರ್ಭಪಾತ ಆಗಿರುವುದನ್ನು ತಿಳಿಸಿದ್ದಾರೆ'' ಎಂದು ಕಣ್ಣೀರಿಟ್ಟರು.
''ಜಗದೀಶ್‍ಗೌಡ ಅವರ ತೋಟದಲ್ಲಿ ನಮ್ಮ ಕಡೆಯ 14 ಮಂದಿ ಕೂಲಿಲೈನ್‍ನಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದೆವು. ಹಲ್ಲೆ ಘಟನೆ ನಡೆಯುವುದಕ್ಕೂ 2 ದಿನಗಳ ಹಿಂದೆ. ಅಲ್ಲೇ ಕೂಲಿಲೈನ್‍ನಲ್ಲಿ ವಾಸವಾಗಿದ್ದ ಕೆಲವರೊಂದಿಗೆ ಮಗುವಿನ ವಿಚಾರದಲ್ಲಿ ನನ್ನ ಭಾವಮೈದನ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಫಿತೋಟದ ಮಾಲಕ ಜಗದೀಶ್‍ಗೌಡ ಮತ್ತು ಅವರ ಪುತ್ರ ನಮ್ಮವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇದರಿಂದ ಬೇಸರಗೊಂಡು ಜಗದೀಶ್‍ಗೌಡನ ತೋಟದಲ್ಲಿ ಕೆಲಸ ಮಾಡುವುದಿಲ್ಲ ಎಂದು ನಮ್ಮ ಕಡೆಯವರು ಹೇಳಿದರು. ಈ ವೇಳೆ ಜಗದಿಶ್‍ಗೌಡ 9ಲಕ್ಷ ರೂ. ಸಾಲವನ್ನು ಮರುಪಾವತಿಸುವಂತೆ ಕಿರುಕುಳ ನೀಡಿದರು. ಸಾಲ ಹೊಂದಿಸಲು ನಮ್ಮ ಕಡೆಯ ಪುರುಷರು ಬೇರೆ ಕಡೆ ಕೆಲಸ ಹುಡುಕಿಕೊಂಡು ಹೋಗಿದ್ದರು'' ಎಂದು ವಿವರಿಸಿದರು.
''ಅ.8ರಂದು ತೋಟದ ಮಾಲಕ ಹಣ ಹಿಂದಿರುಗಿಸಿ ಎಂದು ನಿಂದಿಸಿ ಕಿರುಕುಳ ನೀಡಿದಲ್ಲದೇ ಹಲ್ಲೆ ಮಾಡಿದ್ದಾರೆ. ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದೆವು. ನನ್ನಿಂದ ಮೊಬೈಲ್ ಕಸಿದುಕೊಂಡು ನಂತರ ಕೋಣೆಯಲ್ಲಿ ಕೂಡಿ ಹಾಕಿ ನನ್ನ ಹೊಟ್ಟೆಗೆ ಒದ್ದಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ್ದರಿಂದ ಎರಡುವರೆ ತಿಂಗಳು ಗರ್ಭಿಣಿಯಾಗಿದ್ದ ನನಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಅಸ್ವಸ್ತಳಾದ ನನ್ನನ್ನು ಕಡಬಗೆರೆ ಆಸ್ಪತ್ರೆಗೆ ಕಳಿಸಿಕೊಡಲಾಯಿತು. ಮರುದಿನ ನನ್ನ ತಾಯಿ ನನ್ನನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿದರು. ಹಲ್ಲೆಗೊಳಗಾಗಿದ್ದರಿಂದ ಗರ್ಭಪಾತವಾಗಿದೆ. ಅಲ್ಲಿಂದ ಅಂಬ್ಯುಲೆನಸ್ಸ್ ನಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು' ಎಂದು ತಿಳಿಸಿದರು.
''ಸ್ಕ್ಯಾನಿಂಗ್ ಬಳಿಕ ಗರ್ಭಪಾತವಾಗಿದೆ ಎಂಬುದು ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲಾದ ಬಳಿಕ ಪೊಲೀಸರಿಗೆ ಮೂರು ಪುಟಗಳ ಹೇಳಿಕೆಯನ್ನು ದಾಖಲಿಸಿದ್ದು, ಖಾಲಿ ಹಾಳೆಯಲ್ಲಿ ಸಹಿಯನ್ನು ಪಡೆದುಕೊಂಡರು. ಖಾಲಿ ಹಾಳೆಯಲ್ಲಿ ನಾನು ಹೇಳಿದ ಹೇಳಿಕೆಯನ್ನು ಬಿಟ್ಟು ಬೇರೆ ಹೇಳಿಕೆಯನ್ನು ಬರೆದು ಕೊಳ್ಳಲಾಗಿದೆ. ಪ್ರಕರಣವನ್ನು ತಿರುಚುವ ಹುನ್ನಾರ ನಡೆದಿದೆ. ಗರ್ಭಪಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಹೇಳಿಕೆ ಬರೆದುಕೊಂಡಿಲ್ಲ, ನನಗೆ ನ್ಯಾಯಬೇಕು' ಎಂದು ಕಣ್ಣೀರಿಟ್ಟರು.