ನ.11ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2 ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಬೆಂಗಳೂರು, ಅ. 19: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಅನ್ನು ನವೆಂಬರ್ 11ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಒಟ್ಟು 13 ಸಾವಿರ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಟರ್ಮಿನಲ್-2 ಒಟ್ಟು 2.54ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಮೊದಲ ಹಂತವನ್ನು ನ.11ಕ್ಕೆ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವರ್ಷಕ್ಕೆ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ.
ಹೀಗಾಗಿ ವಿಮಾನ ನಿಲ್ದಾಣ ತನ್ನ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದ್ದು, ಇದೀಗ ಟರ್ಮಿನಲ್-2 ಸಿದ್ಧಗೊಂಡಿದೆ. ವಿಮಾನ ನಿಲ್ದಾಣದ ಒಳಾಂಗಣವು ಸಂಪೂರ್ಣ ಪರಿಸರ ಸ್ನೇಹಿಯಾಗಿ ಮರದಿಂದ ಮತ್ತು ಹಸಿರಿನೊಂದಿಗೆ ವಿನ್ಯಾಸಗೊಂಡಿದೆ. ಆಟೋ ಮೆಟಿಕ್ ಪಾಸ್‍ಪೋರ್ಟ್ ಪರಿಶೀಲನೆ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಯಾಣಿಕರು ಬೋಡಿರ್ಂಗ್ ಮತ್ತು ಡಿಬೋಡಿರ್ಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯವಿದೆ. ಕೆಐಎಎಲ್ ನೂತನ ಟರ್ಮಿನಲ್ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಪಡೆಯಲು ಇನ್‍ಬಿಲ್ಟ್ ಸ್ಮಾರ್ಟ್‍ಫೋನ್ ಅಪ್ಲಿಕೇಷನ್ ತಂತ್ರಜ್ಞಾನ ರೂಪಿಸಲಾಗಿದೆ. ಎರಡನೆ ಹಂತವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.







