ಹಿಮಾಚಲ ಪ್ರದೇಶ ವಿಧಾನ ಸಭೆ ಚುನಾವಣೆ: ಬಿಜೆಪಿಯಿಂದ 62 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

PTI
ಶಿಮ್ಲಾ, 19: ಹಿಮಾಚಲ ಪ್ರದೇಶದ ವಿಧಾನ ಸಭೆಯಲ್ಲಿ ಸ್ಪರ್ಧಿಸಲಿರುವ 62 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ.
ಹಿಮಾಚಲ ಪ್ರದೇಶ ವಿಧಾನ ಸಭೆಯ 68 ಸ್ಥಾನಗಳಿಗೆ ನವೆಂಬರ್ 12ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಫಲಿತಾಂಶ ಡಿಸೆಂಬರ್ 8ರಂದು ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.
ಪಟ್ಟಿ ಬಿಡುಗಡೆ ಮಾಡಿದ ಗಂಟೆಗಳ ಬಳಿಕ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಮಂಡಿ ಜಿಲ್ಲೆಯ ಸೆರಾಜ್ ಕ್ಷೇತ್ರಕ್ಕೆ ತನ್ನ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಸಂಸದ ಸೇರಿದಂತೆ 11 ಶಾಸಕರನ್ನು ಕೈ ಬಿಟ್ಟಿದೆ. ಸಚಿವರಾದ ಸುರೇಶ್ ಭಾರದ್ವಾಜ್ ಹಾಗೂ ರಾಕೇಶ್ ಪಠಾನಿಯ ಅವರ ಕ್ಷೇತ್ರವನ್ನು ಬದಲಾಯಿಸಿದೆ. ಭಾರದ್ವಾಜ್ ಅವರಿಗೆ ಕಾಶುಂಪ್ಟಿ ಕ್ಷೇತ್ರದಿಂದ ಹಾಗೂ ಪಠಾನಿಯಾ ಅವರಿಗೆ ಫತೇಪುರ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಕೇಂದ್ರದ ಮಾಜಿ ಸಹಾಯಕ ಸಚಿವ ಅನಿಲ್ ಶರ್ಮಾ ಅವರು ಮಂಡಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಯ ಮಾಜಿ ರಾಜ್ಯ ವರಿಷ್ಠ ಸತ್ಪಾಲ್ ಸಿಂಗ್ ಸಟ್ಟಿ ಅವರು ಉನಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ಹೆಸರು ಒಳಗೊಂಡಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ಅನಾರೋಗ್ಯದ ಮಾಹಿತಿಯನ್ನು 78 ವರ್ಷದ ಧುಮಾಲ್ ಅವರು ಪಕ್ಷದ ನಾಯಕತ್ವಕ್ಕೆ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ







