ಜಮ್ಮು ಕಾಶ್ಮೀರ: ಶಂಕಿತ ಉಗ್ರನ ಹತ್ಯೆ

ಸಾಂದರ್ಭಿಕ ಚಿತ್ರ, Photo:PTI
ಶ್ರೀನಗರ, 19: ಜಮ್ಮ ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಇಬ್ಬರು ಕಾರ್ಮಿಕರನ್ನು ಹತ್ಯೆಗೈದ ಆರೋಪದಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರ ಬುಧವಾರ ಇನ್ನೋರ್ವ ಶಂಕಿತ ಉಗ್ರ ಹಾರಿಸಿದ ಗುಂಡಿಗೆ ಬಲಿಯಾಗಿದ್ದಾನೆ.
ಉತ್ತರಪ್ರದೇಶದ ಕನೌಜ್ ಜಿಲ್ಲೆಯ ಇಬ್ಬರು ಕಾರ್ಮಿಕರನ್ನು ಹತ್ಯೆಗೈದ ಆರೋಪದಲ್ಲಿ ಶಂಕಿತ ಉಗ್ರ ಇಮ್ರಾನ್ ಬಶೀರ್ ಗನೈಯನ್ನು ಮಂಗಳವಾರ ಬಂಧಿಸಲಾಗಿತ್ತು. ಈತ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬಕ್ಕೆ ಸೇರಿದವನು ಎಂದು ಪೊಲೀಸರು ಗುರುತಿಸಿದ್ದರು.
ಬಂಧಿತ ಶಂಕಿತ ಉಗ್ರ ನೀಡಿದ ಮಾಹಿತಿಯಂತೆ ಪೊಲೀಸರು ಹಾಗೂ ಭದ್ರತಾ ಪಡೆ ನಿರಂತರ ದಾಳಿ ನಡೆಸಿತು. ಶೋಪಿಯಾನದ ನೌಗಾಂವ್ನಲ್ಲಿ ಭದ್ರತಾ ಪಡೆ ಹಾಗೂ ಶಂಕಿತ ಉಗ್ರರ ನಡುವೆ ನಡೆದ ಗುಂಡಿನ ಕಾಳಗದ ಸಂದರ್ಭ ಇನ್ನೋರ್ವ ಉಗ್ರ ಇಮ್ರಾನ್ ಬಶೀರ್ ಗನೈಯ ಮೇಲೆ ಗುಂಡು ಹಾರಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ದೋಷಾರೋಪದ ಸಾಮಗ್ರಿಗಳು, ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳು ಪತ್ತೆಯಾಗಿವೆ.
ಉತ್ತರಪ್ರದೇಶದ ಕನೌಜದ ನಿವಾಸಿಗಳಾದ ಮೋನಿಷ್ ಕುಮಾರ್ ಹಾಗೂ ರಾಮ್ ಸಾಗರ್ನ ಮೇಲೆ ಶಂಕಿತ ಉಗ್ರರು ಸೋಮವಾರ ಗ್ರೆನೇಡ್ ದಾಳಿ ನಡೆಸಿದ್ದರು. ತೀವ್ರ ಗಾಯಗೊಂಡ ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಅನಂತರ ಮೃತಪಟ್ಟಿದ್ದರು.
ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಉತ್ತರಪ್ರದೇಶ ಸರಕಾರ ಬುಧವಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿತ್ತು.







