ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ : ಮನಪಾ ಮೇಯರ್‌ರಿಂದ ರಾತ್ರಿ ಕಾರ್ಯಾಚರಣೆ
ದಂಡದ ಎಚ್ಚರಿಕೆ
ಮಂಗಳೂರು, ಅ. 20: ಸ್ಮಾಟ್ ಸಿಟಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆ ಪಾಲಿಕೆಯ ಸಮಸ್ಯೆಯಾಗಿಯೇ ಉಳಿದಿದೆ. ಅದೆಷ್ಟೇ ಜಾಗೃತಿ, ಮಾಹಿತಿಯ ಹೊರತಾಗಿಯೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರಕ್ರಿಯೆಗೆ ಕಡಿವಾಣ ಬಿದ್ದಿಲ್ಲ. ಇದೀಗ ಖುದ್ದು ಮನಪಾ ನೂತನ ಮೇಯರ್ ಅವರೇ ಕಸ ಹಾಕುವವರ ವಿರುದ್ಧ ಎಚ್ಚರಿಕೆ ನೀಡುವ ಸಲುವಾಗಿ ರಾತ್ರಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಮೇಯರ್ ಜಯಾನಂದ ಅಂಚನ್ ಪಾಲಿಕೆಯ ವಾಹನ ಬಳಸದೆ ಸ್ವಂತ ಕಾರಿನಲ್ಲಿ ಕಸ ರಾಶಿ ಹಾಕುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿರುವುದಲ್ಲದೆ, ರಸ್ತೆ ಪಕ್ಕದಲ್ಲಿ ಕಂಡು ಬಂದ ಕಸವನ್ನು ರಾತ್ರೋ ರಾತ್ರಿ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿರುವ ಸಿಸಿಟಿವಿ ಫೂಟೇಜ್‌ಗಳನ್ನು ಆಧರಿಸಿ ಕಸ ಎಸೆಯುವವರಿಗೆ ದಂಡ ಹಾಕಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ರಾತ್ರಿ ಉರ್ವಾಸ್ಟೋರ್ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿದ್ದ ಮೇಯರ್, ನಗರದ ಬಂದರು, ದಕ್ಕೆ, ಪಾಂಡೇಶ್ವರ, ಕಂಕನಾಡಿ, ಪಂಪ್‌ವೆಲ್ ಹಾಗೂ ನಂತೂರು ಪ್ರದೇಶಗಳಿಗೆ ಭೇಟಿ ನೀಡಿ ಕಸ ತೆರವುಗೊಳಿಸಲು ಆದೇಶಿಸಿದ್ದಾರೆ.
ಕಳೆದ ಒಂದು ವಾರದಿಂದ ಆಗಾಗ್ಗೆ ರಾತ್ರಿ ವೇಳೆ ದಿಢೀರ್ ಭೇಟಿ ನೀಡಿ ಕಸ ತೆರವುಗೊಳಿಸಲು ಕ್ರಮ ವಹಿಸಲಾಗಿದೆ. ಈ ಕಾರ್ಯಕ್ರಮವನ್ನು ಆದ್ಯತೆಯ ಮೇರೆಗೆ ನಡೆಸುವುದಾಗಿ ಮೇಯರ್ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಯಲ್ಲಿ ದಿನವೊಂದಕ್ಕೆ ಸರಾಸರಿ 250ರಿಂದ 300 ಟನ್ ಕಸ ಉತ್ಪಾದನೆಯಾಗುತ್ತದೆ. ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕಿಸಿ ನೀಡಬೇಕೆಂಬ ನಿಯಮವನ್ನು ರೂಪಿಸಲಾಗಿ ದ್ದರೂ ಶೇ. 40ರಷ್ಟು ಜನರು ಮಾತ್ರವೇ ಈ ನಿಯಮವನ್ನು ಅನುಸರಿಸುತ್ತಿದ್ದಾರೆ. ರಾತ್ರಿ ಹೊತ್ತು ಸಿಕ್ಕ ಸಿಕ್ಕಲ್ಲಿ ಕಸ ಎಸೆಯುವವರ ಮನೋಸ್ಥಿತಿಯನ್ನು ದಂಡ, ಸಿಸಿ ಕ್ಯಾಮರಾದ ಹೊರತಾಗಿಯೂ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ.
ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರಿಗೆ ಕನಿಷ್ಠ 1500 ರೂ.ನಿಂದ ಗರಿಷ್ಠ 25000 ರೂ. ದಂಡ ವಿಧಿಸುವ ಅಧಿಕಾರ ಪಾಲಿಕೆಯ ಆರೋಗ್ಯ ನಿರೀಕ್ಷಕರು ಹಾಗೂ ಆರೋಗ್ಯಾಧಿಕಾರಿಗೆ ನೀಡಲಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಒಮ್ಮೆ ಎಚ್ಚಿರಕೆ ನೀಡಲಾಗುತ್ತದೆ. ಮತ್ತೆ ಅದೇ ತಪುಪ ಮಾಡಿದರೆ ದಂಡ ವಿಧಿಸುವುದು ಅನಿವಾರ್ಯ ಎನ್ನುತ್ತಾರೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯಬಾರದು. ಆ ರೀತಿ ಕಸ ಎಸೆಯುವುದು ಕಂಡುಬಂದಲ್ಲಿ ಯಾರಾದರೂ ಫೋಟೋ ತೆಗೆದು ಪಾಲಿಕೆಯ ಮೊಬೈಲ್ ಸಂಖ್ಯೆ 9449007722 ಗೆ ವಾಟ್ಸಾಪ್ ಮಾಡಬಹುದು. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಮನೆಗೆ ಬರುವ ಪೌರ ಕಾರ್ಮಿಕರಿಗೆ ನೀಡಬೇಕು. ಪೌರ ಕಾರ್ಮಿಕರು ನಿಯಮಿತವಾಗಿ ಭೇಟಿ ನೀಡದಿದ್ದಲ್ಲಿ ಪಾಲಿಕೆಯ ಗಮನಕ್ಕೆ ತರಬಹುದು ಎಂದು ಡಾ. ಮಂಜಯ್ಯ ಶೆಟ್ಟಿ ತಿಳಿಸಿದ್ದಾರೆ.