ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳ; ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ಸಚಿವ ಸಂಪುಟ ಅಸ್ತು
ಬೆಂಗಳೂರು, ಅ. 20: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ(ಎಸ್‍ಸಿ-ಎಸ್‍ಟಿ)ಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿರುವುದಕ್ಕೆ ಸಂಬಂಧಿಸಿದಂತೆ ಅಧ್ಯಾದೇಶ(ಸುಗ್ರೀವಾಜ್ಞೆ)ದಮೂಲಕ ಅನುಷ್ಠಾನಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಎಸ್‍ಸಿ-ಶೇ.15ರಿಂದ ಶೇ.17 ಹಾಗೂ ಎಸ್‍ಟಿ-ಶೇ.3ರಿಂದ ಶೇ.7ಕ್ಕೆ ಹೆಚ್ಚಳವಾಗಲಿದೆ. ಒಂದೆರಡು ದಿನಗಳಲ್ಲಿ ಸುಗ್ರೀವಾಜ್ಞೆಯನ್ನು ಅಂಕಿತಕ್ಕೆ ರಾಜ್ಯಪಾಲರಿಗೆ ರವಾನಿಸಲಾಗುವುದು' ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ‘ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎಲ್ಲವನ್ನು ಪರಿಶೀಲಿಸಿ ಸುಗೀವಾಜ್ಞೆ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.ನಾವು ಬೇರೆ ಯಾವುದೇ ಸಮುದಾಯದ ಮೀಸಲಾತಿಯನ್ನು ಕಿತ್ತು ಹಾಕುವುದಾಗಲಿ, ಇಲ್ಲವೆ ರದ್ದುಪಡಿಸುವುದಿಲ್ಲ. ಕಾನೂನು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಈ ತೀರ್ಮಾನ ತೆಗೆದುಕೊಂಡಿದ್ದೇವೆ' ಎಂದು ಸ್ಪಷ್ಟಪಡಿಸಿದರು.
‘ಈಗಾಗಲೇ ಕೇಂದ್ರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿದೆ. ಆ ವೇಳೆ ಯಾವುದೇ ಸಮುದಾಯದ ಮೀಸಲಾತಿ ತೆಗೆದುಹಾಕಿಲ್ಲ.ಅದೇ ಮಾದರಿಯಲ್ಲಿ ನಾವೂ ತೀರ್ಮಾನ ತೆಗೆದುಕೊಂಡಿದ್ದೇವೆ.ಪರಿಶಿಷ್ಟ ಜಾತಿಯಲ್ಲಿ 103 ಹಾಗೂ ಪರಿಶಿಷ್ಟ ವರ್ಗದಲ್ಲಿ 56 ಜಾತಿಗಳಿವೆ.ಪರಿಶಿಷ್ಟರ ಸಂಖ್ಯೆ ಹೆಚ್ಚಳವಾಗಿದ್ದು, ಎಲ್ಲ ಜಾತಿಗಳಿಗೂ ಮೀಸಲಾತಿಯ ಪ್ರಾತಿನಿಧ್ಯ ಕಲ್ಪಿಸಬೇಕಿದೆ' ಎಂದು ಅವರು ನುಡಿದರು.
ನ್ಯಾ.ನಾಗಮೋಹನ್ ದಾಸ್ ಶಿಫಾರಸ್ಸನ್ನು ಆಧರಿಸಿ ಸರಕಾರ ತೆಗೆದುಕೊಂಡಿದ್ದೇವೆ. ಎಸ್ಸಿ-ಎಸ್ಟಿಗೆ ಮೀಸಲಾತಿ ಹೆಚ್ಚಳ ಹಾಗೂ ಇದೇ ಸಮುದಾಯದಲ್ಲಿ ಆರ್ಥಿಕವಾಗಿ ಪ್ರಬಲವಾಗಿರುವವರು ಮೀಸಲಾತಿಯನ್ನು ಬಿಟ್ಟುಕೊಡಬೇಕೆಂದು ಸಲಹೆ ನೀಡಿದ್ದಾರೆ.ಇನ್ನೊಂದೆಡೆ ನ್ಯಾ.ಸದಾಶಿವ ಆಯೋಗ ಒಳ ಮೀಸಲಾತಿ ಅನುಷ್ಠಾನಗೊಳಿಸಲು ಸಲಹೆ ನೀಡಿದೆ. ಇವೆಲ್ಲವನ್ನು ಪರಿಶೀಲಿಸಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ' ಎಂದು ಅವರು ತಿಳಿಸಿದರು.
‘ಸರಕಾರದ ಸುಗ್ರೀವಾಜ್ಞೆ ಹೊರಡಿಸಿದ ತಕ್ಷಣ ಕೋರ್ಟ್‍ನಲ್ಲಿ ಇದನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಭಾವಿಸಬೇಕಾಗಿಲ್ಲ. ಸಂವಿಧಾನಾತ್ಮಕ ರಕ್ಷಣೆ ಕಲ್ಪಿಸುವ ದೃಷ್ಟಿಯಿಂದ ಸಂವಿಧಾನದ ಸೆಡ್ಯೂಲ್-9ಕ್ಕೆ ತಿದ್ದುಪಡಿ ಸಂಸತ್‍ನಲ್ಲಿ ಆಗಬೇಕಿದೆ. ಈಗಾಗಲೇ ತಮಿಳುನಾಡು ಸರಕಾರ ಶೇ.69ರಷ್ಟು ಮೀಸಲಾತಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇಲ್ಲಿಯೂ ನ್ಯಾಯಾಲಯ ಮಧ್ಯಪ್ರವೇಶ ಮಾಡಿದೆಯೇ ಹೊರತು ಇದಕ್ಕೆ ತಡೆಯಾಜ್ಞೆ ನೀಡಿಲ್ಲ. ನಮ್ಮ ಬದ್ಧತೆ ಕಾರಣಕ್ಕೆ ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ' ಎಂದು ಅವರು ಸ್ಪಷ್ಟಪಡಿಸಿದರು.