ಅ. 24ರಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ ದೀಪಾವಳಿ ಆಚರಣೆ

ಮಂಗಳೂರು, ಅ.20: ಸಂತ ತೆರೆಸಾ ವಿಚಾರ ವೇದಿಕೆಯಿಂದ ಅ. 24ರಂದು ಸಂದೇಶ ಪ್ರತಿಷ್ಠಾನದಲ್ಲಿ ದೀಪಾವಳಿ ಹಬ್ಬವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಪ್ರೀತಿ ಎಂಬ ದೀಪ, ಸ್ನೇಹಮಯ ಹಣತೆಯಿಂದ ಮಾನವತೆಯನ್ನು ಹರಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 24ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಘಟಕರು ನಿಗದಿಪಡಿಸಿದ ಸ್ಥಳದಲ್ಲಿ ಗೂಡುದೀಪವನ್ನು ವ್ಯವಸ್ಥೆ ಮಾಡಬೇಕು. ರೆಡಿಮೇಡ್ ವಸ್ತುಗಳನ್ನು ಬಳದೆ ಸ್ವಪ್ರಯತ್ನದಿಂದ ಗೂಡುದೀಪ ರಚಿಸಬೇಕು. ಕ್ರಿಯಾತ್ಮಕ ಹಾಗೂ ಕಲಾತ್ಮಕ ವಾಗಿ ರಚಿಸಲ್ಪಟ್ಟ ಗೂಡುದೀಪಗಳಿಗೆ ಆದ್ಯತೆ ನೀಡಲಾಗುವುದು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ನಗದು, ಫಲಕ ಹಾಗೂ ಇಬ್ಬರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.
ಅ. 22ರಂದು ಸಂಜೆ 4 ಗಂಟೆಯ ಒಳಗೆ 9448503739, 9845291088, 9449051515 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಕಾರ್ಯಕ್ರಮವನ್ನು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಉದ್ಘಾಟಿಸುವರು. ಮಂಗಳೂರು ವಿವಿಯ ಉಪ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಹಿರಿಯ ವರದಿಗಾರ ಮುಹಮ್ಮದ್ ಆರಿಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ವರಾಂಜಲಿ ಮ್ಯೂಸಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಹಾಗೂ ವಂ. ವಾಲ್ಟರ್ ಅಲ್ಬುಕರ್ಕ್ ಮೆಮೋರಿಯಲ್ ಸಂಗೀತ ತಂಡದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಯ್ ಕ್ಯಾಸ್ತಲಿನೊ ತಿಳಿಸಿದರು.
ಮುಂದಿನ ದಿನನಗಳಲ್ಲಿ ವೇದಿಕೆಯ ವತಿಯಿಂದ ಕ್ರಿಸ್‌ಮಸ್, ರಂಝಾನ್ ಸೇರಿದಂತೆ ವರ್ಷದಲ್ಲಿ ನಾಲ್ಕೈದು ಹಬ್ಬಗಳನ್ನು ಸೌಹಾರ್ದದ ಸಂಕೇತವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಭಾರತೀಯ ಬಹು ಸಂಸ್ಕೃತಿ ಯನ್ನು ಎತ್ತಿ ಹಿಡಿಯುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಂಘಟಕರಾದ ಸುಶೀಲ್ ನೊರೊನ್ನಾ, ಮಾಜಿ ಮೇಯರ್ ಅಶ್ರಫ್, ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್, ದಲಿತ ಸಂಘಟನೆಗಳ ಪ್ರಮುಖರಾದ ಎಂ. ದೇವದಾಸ್, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸ್ಟ್ಯಾನಿ ಲೋಬೊ, ಸಾಮಾಜಿಕ ಕಾರ್ಯಕರ್ತೆ ಸುಮತಿ ಹೆಗ್ಡೆ ಉಪಸ್ಥಿತರಿದ್ದರು.