ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ಪೊಲೀಸ್ ಕಾನ್‌ಸ್ಟೇಬಲ್ ಪ್ರವೀಣ್ ಸಾಲ್ಯಾನ್‌ಗೆ ಜೀವಾವಧಿ ಶಿಕ್ಷೆ

ಮಂಗಳೂರು, ಅ.20: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪಿ ಪೊಲೀಸ್ ಕಾನ್‌ಸ್ಟೇಬಲ್‌ಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ)ವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದ.ಕ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಬಜ್ಪೆ ಸಿದ್ಧಾರ್ಥನಗರ ನಿವಾಸಿ ಪ್ರವೀಣ್ ಸಾಲ್ಯಾನ್ (35) ಶಿಕ್ಷೆಗೊಳಗಾದ ಆರೋಪಿ.
ಪ್ರಕರಣದ ವಿವರ: ಆರೋಪಿ ಪ್ರವೀಣ್ ಸಾಲ್ಯಾನ್ ಅಪ್ರಾಪ್ತ ಬಾಲಕಿಯನ್ನು 2015ರ ಫೆ.16ರಂದು ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ಪ್ರೀತಿಸುವುದಾಗಿ ಹೇಳಿಕೊಂಡು ಬಳಿಕ ನಿರಂತರವಾಗಿ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸುತ್ತಲೇ ಅಶ್ಲೀಲ ಸಂಭಾಷಣೆ ನಡೆಸುತ್ತಿದ್ದ ಎನ್ನಲಾಗಿದೆ.
ಬಾಲಕಿಯ ಮುಗ್ಧತೆಯನ್ನು ದಾಳವಾಗಿಸಿಕೊಂಡ ಆರೋಪಿಯು ಬಾಲಕಿ ಬಳಿ 1 ಲಕ್ಷ ರೂ. ಹಣ ಅಥವಾ ಚಿನ್ನ ನೀಡಬೇಕೆಂದು ಬೇಡಿಕೆಯಿರಿಸಿದ್ದ ಎಂದು ಆರೋಪಿಸಲಾಗಿತ್ತು. ಇದರಿಂದ ನೊಂದ ಬಾಲಕಿಯು ತನ್ನ ಮನೆಯ ಬೆಡ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸ್ ಇಲಾಖೆಯಿಂದ ಅಮಾನತು ಮಾಡಲಾಗಿತ್ತು.
ಈ ಬಗ್ಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶೆ (ಎಫ್‌ಟಿಎಸ್‌ಸಿ-1 (ಪೋಕ್ಸೋ) ಮಂಜುಳಾ ಇಟ್ಟಿ ಸಮಗ್ರ ವಿಚಾರಣೆ ನಡೆಸಿ ಆರೋಪಿಗೆ ಐಪಿಸಿ 305ರಡಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ಸೆಕ್ಷನ್ 12ರಡಿ (ಪೊಕ್ಸೊ) 3 ವರ್ಷ ಕಠಿಣ ಸಜೆ ಹಾಗೂ 1 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.