860 ಕೋಟಿ ರೂ.ಹಗರಣದಲ್ಲಿ ಬೊಮ್ಮಾಯಿ, ಫಡ್ನವೀಸ್, ಸೋಮಶೇಖರ್ ಭಾಗಿ: ಎಂ ಲಕ್ಷ್ಮಣ್ ಆರೋಪ
''ರಮೇಶ್ ಜಾರಕಿಹೊಳಿಯ ದಿವಾಳಿ ಸಂಸ್ಥೆಗೆ 132ಕೋಟಿ ರೂ.ಲಾಭ''

Photo - [ಸೋಮಶೇಖರ್ | ದೇವೇಂದ್ರ ಫಡ್ನವೀಸ್ | ಬಸವರಾಜ ಬೊಮ್ಮಾಯಿ]
ಬೆಂಗಳೂರು, ಅ.20: ''ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 860 ಕೋಟಿ ರೂ.ಗಳ ಬಹುದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದಾರೆ'' ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.
ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಲಕತ್ವದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯು 9 ಸಹಕಾರಿ ಬ್ಯಾಂಕ್ಗಳಲ್ಲಿ 578 ಕೋಟಿ ರೂ.ಸಾಲ ಮಾಡಿ, ಮರುಪಾವತಿ ಮಾಡಿಲ್ಲ. ಅಪೆಕ್ಸ್ ಬ್ಯಾಂಕ್ ಈ ಕಾರ್ಖಾನೆಯನ್ನು ಎನ್ಪಿಎ(ದಿವಾಳಿ ಸಂಸ್ಥೆ) ಎಂದು ಘೋಷಿಸಿದೆ. ಆನಂತರ ಈ ದಿವಾಳಿ ಕಂಪೆನಿ 2021-22 ಹಾಗೂ 2022-23ನೆ ಸಾಲಿನಲ್ಲಿ ಕ್ರಮವಾಗಿ 60 ಹಾಗೂ 72 ಕೋಟಿ ರೂ.ಲಾಭ ಮಾಡಿದೆ'' ಎಂದು ಆರೋಪಿಸಿದರು.
ಈ ಸಂಸ್ಥೆಗೆ 9 ಜನ ನಿರ್ದೇಶಕರಿದ್ದರೂ ಇವರನ್ನು ಉದ್ದೇಶಿತ ಸುಸ್ಥಿದಾರರು ಎಂದು ಅಪೆಕ್ಸ್ ಬ್ಯಾಂಕ್ ಘೋಷಿಸಿದೆ. ಈ ರೀತಿ ಉದ್ದೇಶಿತ ಸುಸ್ಥಿದಾರ ಎಂದು ಘೋಷಿಸಿದ ನಂತರ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆದರೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಕೃಪಾಕಟಾಕ್ಷದಿಂದ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ದೂರಿದರು.
578 ಕೋಟಿ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೆ, ಆದಾಯ ತೆರಿಗೆ ಇಲಾಖೆಗೆ 150 ಕೋಟಿ ಪಾವತಿ ಬಾಕಿ, ರೈತರ ಬಳಿ 50 ಕೋಟಿ ಬಾಕಿ ಹಾಗೂ ಗುತ್ತಿಗೆದಾರರ ಬಳಿ 50 ಕೋಟಿ, ಇತರೆ ಸಾಲ 60 ಕೋಟಿ ಬಾಕಿ ಉಳಿಸಿಕೊಂಡು ರಮೇಶ್ ಜಾರಕಿಹೊಳಿ ಮೋಸ ಮಾಡಿದ್ದಾರೆ. 2019ರಲ್ಲಿ ಅಪೆಕ್ಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ನೊಟೀಸ್ ನೀಡಿ ಬಾಕಿ ಹಣ ವಾಪಸ್ ಮಾಡದಿದ್ದರೆ, ಕಾರ್ಖಾನೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆಂದು ತಿಳಿಸಿದ್ದರು ಎಂದು ಅವರು ಹೇಳಿದರು.
ರಮೇಶ್ ಜಾರಕಿಹೊಳಿ ಈ ನೊಟೀಸ್ ವಿರುದ್ಧ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. 2019ರ ನ.28ರಂದು ಹೈಕೋರ್ಟ್ 578 ಕೋಟಿ ಸಾಲದಲ್ಲಿ ಶೇ.50ರಷ್ಟು ಸಾಲವನ್ನು ಆರು ವಾರಗಳಲ್ಲಿ ಮರುಪಾವತಿ ಮಾಡುವಂತೆ ನಿರ್ದೇಶನ ನೀಡಿತ್ತು. 2021ರ ಡಿ.2ರಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಶೋಕಾಸ್ ನೊಟೀಸ್ ನೀಡಿ, ನ್ಯಾಯಾಲಯದ ಆದೇಶದಂತೆ ಸಾಲ ವಸೂಲಿ ಮಾಡಲು ಆಸ್ತಿ ಮುಟ್ಟುಗೋಲು ಹಾಕುವಂತೆ ಆದೇಶ ನೀಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಲಕ್ಷ್ಮಣ್ ದೂರಿದರು.
ಸುಸ್ಥಿದಾರ ಎಂದು ಘೋಷಿಸಲ್ಪಟ್ಟಿರುವ ರಮೇಶ್ ಜಾರಕಿಹೊಳಿ ಹಾಗೂ ಅವರ ಜತೆಗಿನ ಇತರೆ ನಿರ್ದೇಶಕರು ಬ್ಯಾಂಕುಗಳಲ್ಲಿ ಕೋಟ್ಯಂತರ ರೂ.ಡ್ರಾ ಮಾಡಲು ಹೇಗೆ ಸಾಧ್ಯ?. ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಬಂಧಿಸಬೇಕು. ಈ ವ್ಯಕ್ತಿಯನ್ನು ಬಿಜೆಪಿ ಮಂತ್ರಿಮಂಡಲಕ್ಕೆ ತೆಗೆದುಕೊಂಡು ಮಂತ್ರಿ ಮಾಡಲು ಹೊರಟಿದೆ. ಇಂತಹವರಿಗೆ ಯಾವುದೇ ಕಾರಣಕ್ಕೂ ಸಂವಿಧಾನಿಕ ಹುದ್ದೆ ನೀಡಬಾರದು ಎಂದು ಲಕ್ಷ್ಮಣ್ ಆಗ್ರಹಿಸಿದರು.
.
‘ಬಸವರಾಜ ಬೊಮ್ಮಾಯಿ ಸಂಕಲ್ಪ ಸಮಾವೇಶ ಮಾಡಿ ನಮಗೆ ಧಮ್ಮು ತಾಕತ್ತಿನ ಸವಾಲು ಹಾಕುತ್ತಾರೆ. ನಿಮಗೆ ಧಮ್ಮು ತಾಕತ್ತು ಇದ್ದರೆ ರಮೇಶ್ ಜಾರಕಿಹೊಳಿ ಆಸ್ತಿ ಮುಟ್ಟುಗೋಲು ಹಾಕಿ, ಬಂಧಿಸಿ. ಬಿಜೆಪಿಯವರಿಗೊಂದು ಕಾಂಗ್ರೆಸ್ ನವರಿಗೊಂದು ನ್ಯಾಯವೇ? ನಿಮಗೆ ಎಷ್ಟು ಕಮಿಷನ್ ಬಂದಿದೆ? ಸರಕಾರ ಈ ವಿಚಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಪೇಸಿಎಂ ಅಭಿಯಾನ ಮಾದರಿಯಲ್ಲಿ ಬೆಳಗಾವಿ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಹಗರಣದ ವಿರುದ್ದ ಅಭಿಯಾನ ಮಾಡಲಾಗುವುದು'
- ಲಕ್ಷ್ಮಣ್ ಕೆಪಿಸಿಸಿ ವಕ್ತಾರ







