ಸಿದ್ಧಾಂತದ ಹೆಸರಿನಲ್ಲಿ ಸಿನಿಮಾಗಳಲ್ಲಿ ಹಿಂಸೆಗೆ ಅನುಮೋದನೆ : ರಘುನಂದನ್ ಕಳವಳ

ಉಡುಪಿ, ಅ.20: ಇಂದು ಸಿನಿಮಾದಲ್ಲಿ ಹಿಂಸೆಯ ಸ್ವರೂಪ ಬದಲಾ ಗುತ್ತಿದ್ದು, ಕಾನೂನನ್ನು ಕೈಗೆ ತೆಗೆದು ಕೊಳ್ಳುತ್ತಿರುವ ನಾಯಕ ಪಾತ್ರಗಳೇ ಹೆಚ್ಚುತ್ತಿವೆ. ಪರದೆಯ ಮೇಲೆ ಸಿದ್ಧಾಂತದ ಹೆಸರಿನಲ್ಲಿ ಹಿಂಸೆಯನ್ನು ಅನುಮೋದಿಸುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ರಘುನಂದನ ಹೇಳಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸಾಯನ್ಸ್‌ನಲ್ಲಿ ‘ಸಿನೆಮಾದಲ್ಲಿ ಫ್ಯಾಸಿಸಂ’ ಎಂಬ ವಿಷಯದ ಕುರಿತು ಮಾತನಾಡಿದ ರಘುನಂದನ್, ಜನಪ್ರಿಯ ಸಿನಿಮಾ ಪ್ರಕಾರವು ನಮ್ಮ ಸಮಾಜದ ಕೆಲವು ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ. ಕಾನೂನಿನ ಮೇಲಿನ ಗೌರವದಿಂದ ದೂರ ಸರಿದು ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳುವತ್ತ ಸಾಗಿದ್ದೇವೆ. ಈಗ ತೆರೆಯ ಮೇಲೂ ಈ ಬಗೆಯ ಸೈದ್ಧಾಂತಿಕ ಹಿಂಸೆ ಸಾಮಾನ್ಯವಾಗಿದೆ ಎಂದು ಅವರು ವಿವರಿಸಿದರು.
ಜಂಜೀರ್ (1973), ಶೋಲೆ (1975), ಗಂಗಾಜಲ್ (2003), ಮಾನ್ಸೂನ್ ಶೂಟೌಟ್ (2013), ವಿಕ್ರಮ್ ವೇದಾ (2017), ಮುಲ್ಕ್ (2018) ಮುಂತಾದ ಚಿತ್ರಗಳ ದೃಶ್ಯಗಳೊಂದಿಗೆ ತಮ್ಮ ದೃಷ್ಟಿಕೋನವನ್ನು ವಿವರಿಸಿದ ಅವರು ಕಾಲಾನುಕ್ರಮದಲ್ಲಿ ಚಿತ್ರಗಳು ಸಮಾಜದಲ್ಲಿ ಬದಲಾಗು ತ್ತಿರುವ ಹಿಂಸೆಯ ಸ್ವರೂಪವನ್ನು ಸಹ ಪ್ರತಿಬಿಂಬಿಸುತ್ತದೆ ಎಂದರು.
ಅನೇಕ ಮೆಗಾ-ಬಜೆಟ್ ಚಲನಚಿತ್ರಗಳು ಬಹುತೇಕ ಫ್ಯಾಸಿಸ್ಟ್ ಪ್ರವೃತ್ತಿಯನ್ನು ಅನುಮೋದಿಸುತ್ತಾ ಜನರನ್ನು ವಾಸ್ತವದಿಂದ ದೂರಕ್ಕೆ ಕರೆದೊಯ್ಯುವ ಕುರಿತಂತೆಯೂ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಜಿಸಿಪಿಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮತ್ತು ಪ್ರೊ.ಫಣಿರಾಜ್ ಸಂವಾದ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡರು.







