ಬೆಂಗಳೂರು; ಶಾಲಾ ಮಕ್ಕಳಿಗೆ ಸ್ವೆಟರ್ ವಿತರಣೆಯ ಟೆಂಡರ್ ರದ್ದು, ಮಕ್ಕಳ ಖಾತೆ ನೇರ ಹಣ ವರ್ಗಾವಣೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ. 20: ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳಿಗೆ ಸ್ವೆಟರ್ ನೀಡಲು ಪ್ರತಿವರ್ಷದಂತೆ ಟೆಂಡರ್ ಕರೆಯಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಟೆಂಡರ್ ಅನ್ನು ರದ್ದುಗೊಳಿಸಿ, ಸ್ವೆಟರ್ ಕೊಳ್ಳಲು ತಗಲುವ ವೆಚ್ಚವನ್ನು ನೇರವಾಗಿ ಶಾಲಾ ಮಕ್ಕಳ ಖಾತೆ ಹಾಕಲಾಗುವುದು ಎಂದು ಬಿಬಿಎಂಪಿಯ ಶಿಕ್ಷಣ ವಿಭಾಗದ ಜಂಟಿ ಆಯುಕ್ತ ಉಮೇಶ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕರೆದ ಟೆಂಡರ್ ನಲ್ಲಿ ದೋಷಗಳು ಇರುವ ಕಾರಣ ಪುನಾಃ ಟೆಂಡರ್ ಕರೆದು ಮಕ್ಕಳಿಗೆ ಸ್ವೆಟರ್ ಪೂರೈಕೆ ಮಾಡುವಲ್ಲಿ ವಿಳಂಬವಾಗಬಹುದು. ಹಾಗಾಗಿ ಶೈಕ್ಷಣಿಕ ವರ್ಷವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಖಾತೆಗೆ ಹಣ ವರ್ಗಾವಣೆ ಮಾಡಲು ನಿರ್ಧಾರೆ ತೆಗೆದುಕೊಳ್ಳಲಾಗಿದೆ. ಈ ಕುರಿತು ಮುಖ್ಯ ಆಯುಕ್ತರೊಂದಿಗೆ ಚರ್ಚಿಸಲಾಗಿದೆ ಎಂದರು.
ಪಾಲಿಕೆ ವ್ಯಾಪ್ತಿಯ 25 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ಪ್ರತಿ ಮಗುವಿಗೂ ತಲಾ 650ರೂ.ನಂತೆ ಎರಡು ಜೊತೆ ಸ್ವೇಟರ್ ಕೊಳ್ಳಲು ಹಣ ವರ್ಗಾವಣೆಗೆ ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಶಾಲಾ ಮಕ್ಕಳ ಖಾತೆ, ದಾಖಲೆಗಳ ಮಾಹಿತಿ ಕಲೆಹಾಕಲಾಗಿದ್ದು, ಬ್ಯಾಂಕ್ ಖಾತೆ ಇಲ್ಲದ ಮಕ್ಕಳ ಪೋಷಕರು ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.





