ವಿಐಪಿ ಸಂಸ್ಕೃತಿ:ಸಂಸದರ ಚಿಕಿತ್ಸೆಗೆ ಏಮ್ಸ್ ಮಾರ್ಗಸೂಚಿಯನ್ನು ಟೀಕಿಸಿದ ವೈದ್ಯರು

Photo : NDTV
ಹೊಸದಿಲ್ಲಿ,ಅ.20: ಸಂಸತ್ತಿನ ಹಾಲಿ ಸದಸ್ಯರಿಗೆ ಚಿಕಿತ್ಸಾ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸಲು ದಿಲ್ಲಿಯ ಏಮ್ಸ್(AIIMS, Delhi) ಹೊರಡಿಸಿರುವ ಮಾರ್ಗಸೂಚಿಗಳು ಸಾಮಾನ್ಯ ರೋಗಿಗಳಿಗೆ ತೊಂದರೆಯನ್ನುಂಟು ಮಾಡಬಹುದು ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಏಮ್ಸ್ ನಿರ್ದೇಶಕ ಎಂ.ಶ್ರೀನಿವಾಸ (M. Srinivas)ಅವರು ಬುಧವಾರ ಲೋಕಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಸಂಸದರಿಗೆ ಚಿಕಿತ್ಸಾ ವ್ಯವಸ್ಥೆಗಳ ಸಮನ್ವಯ ಮತ್ತು ಅನುಕೂಲಕ್ಕಾಗಿ ದಿನದ 24 ಗಂಟೆಯೂ ಡ್ಯೂಟಿ ಡಾಕ್ಟರ್(Duty Doctor)ಗಳು ಆಸ್ಪತ್ರೆಯ ನಿಯಂತ್ರಣ ಕೊಠಡಿಯಲ್ಲಿ ಲಭ್ಯರಿರುತ್ತಾರೆ ಎಂದು ತಿಳಿಸಿದ್ದಾರೆ.
ಸಂಸದರ ಸಿಬ್ಬಂದಿ ಸೂಚಿಸಲಾಗಿರುವ ದೂರವಾಣಿಗಳ ಸಂಖ್ಯೆಗಳ ಮೂಲಕ ಕರ್ತವ್ಯದಲ್ಲಿರುವ ಅಧಿಕಾರಿಯನ್ನು ಸಂಪರ್ಕಿಸಬಹುದು. ಬಳಿಕ ಅಧಿಕಾರಿ ಭೇಟಿ ಸಮಯವನ್ನು ನಿಗದಿಗೊಳಿಸಲು ತಜ್ಞವೈದ್ಯರು ಅಥವಾ ಸಂಬಂಧಿತ ವಿಭಾಗದ ಮುಖ್ಯಸ್ಥರೊಡನೆ ಮಾತನಾಡುತ್ತಾರೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಲೋಕಸಭಾ ಅಥವಾ ರಾಜ್ಯಸಭಾ ಸಚಿವಾಲಯ ಅಥವಾ ಸಂಸದರ ಸಿಬ್ಬಂದಿ ಕರ್ತವ್ಯದಲ್ಲಿರುವ ಅಧಿಕಾರಿಯನ್ನು ಸಂಪರ್ಕಿಸಬಹುದು ಮತ್ತು ಅವರು ತುರ್ತು ಸೇವೆಗಳಿಗೆ ಮಾರ್ಗದರ್ಶನವನ್ನು ನೀಡುತ್ತಾರೆ ಎಂದೂ ಪತ್ರದಲ್ಲಿ ಹೇಳಲಾಗಿದೆ.
ಸಂಸದರಿಗೆ ವಿಶೇಷ ಸೌಲಭ್ಯಗಳು ‘ವಿಐಪಿ ಸಂಸ್ಕೃತಿ’ಯನ್ನು ಸೂಚಿಸುತ್ತವೆ ಎಂದು ಟೀಕಿಸಿರುವ ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್,ಇನ್ನೊಬ್ಬರ ವಿಶೇಷ ಸೌಲಭ್ಯಗಳಿಂದಾಗಿ ಬೇರೆ ರೋಗಿಗಳು ನರಳುವಂತಾಗಬಾರದು ಎಂದು ಹೇಳಿದೆ.







