ಕಣ್ಣೂರು: ಮರಳು ಅಕ್ರಮ ಸಾಗಾಟ ಆರೋಪ; ಇಬ್ಬರ ಬಂಧನ
ಎರಡು ಟಿಪ್ಪರ್, ಜೆಸಿಬಿ, ಮೂರು ದ್ವಿಚಕ್ರ ವಾಹನ ವಶಕ್ಕೆ
ಮಂಗಳೂರು, ಅ.20: ನಗರ ಹೊರವಲಯದ ಕಣ್ಣೂರು ಬಳಿ ನೇತ್ರಾವತಿ ನದಿಯ ದಡದಿಂದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿ, ದಾಸ್ತಾನಿರಿಸಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್ ತಂಡವು ಗುರುವಾರ ಮುಂಜಾವ ಸುಮಾರು 6ಕ್ಕೆ ದಾಳಿ ನಡೆಸಿದೆ.
ಮರಳು ಅಕ್ರಮ ಸಾಗಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ ಟಿಪ್ಪರ್ ಚಾಲಕ-ಮಾಲಕ ಮುಹಮ್ಮದ್ ಅಯ್ಯೂಬ್ ಮತ್ತು ಜೆಸಿಬಿ ಚಾಲಕ ಅಲ್ಲಾವುದ್ದೀನ್ ಎಂಬವರನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಮರಳು ತುಂಬಿದ ಟಿಪ್ಪರ್ ಲಾರಿ, ಮರಳು ತುಂಬಿಸಲು ತಂದಿರಿಸಿದ ಟಿಪ್ಪರ್ ಲಾರಿ, ಮರಳು ಲೋಡ್ ಮಾಡಲು ಉಪಯೋಗಿಸಿದ ಜೆಸಿಬಿ ಮತ್ತು ಅಕ್ರಮ ಮರಳು ಸಾಗಾಟಕ್ಕೆ ಸಹಕರಿಸಿದ ಮೂರು ದ್ವಿಚಕ್ರ ವಾಹನ ಹಾಗೂ 10 ಯುನಿಟ್‌ನಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಟಿಪ್ಪರ್ ಹಾಗೂ ಜೆಸಿಬಿ ಚಾಲಕ, ಮಾಲಕ, ಸ್ಥಳದಿಂದ ಪರಾರಿಯಾದ ದ್ವಿಚಕ್ರ ವಾಹನ ಸವಾರರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ತಾನು ದಾಳಿ ನಡೆಸಿದಾಗ ಆರೋಪಿ ಚಾಲಕ ಟಿಪ್ಪರ್ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದ. ಅಲ್ಲೇ ಇದ್ದ ಮತ್ತೊಂದು ಟಿಪ್ಪರ್ ಲಾರಿಯ ಚಾಲಕ ಕಣ್ಣೂರು ಬೋರುಗುಡ್ಡೆಯ ಮುಹಮ್ಮದ್ ಅಯ್ಯೂಬ್ (45) ಎಂಬಾತನನ್ನು ವಿಚಾರಿಸಿದಾಗ ದೋಣಿ ಮೂಲಕ ನದಿಯಿಂದ ಮರಳು ತೆಗೆದು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಜೆಸಿಬಿ ಚಾಲಕ ಜಾರ್ಖಂಡ್‌ನ ಅಲ್ಲಾವುದ್ದೀನ್ (40)ನನ್ನು ವಿಚಾರಿಸಿದಾಗ ಮುಹಮ್ಮದ್ ಅಯ್ಯೂಬ್‌ನ ಸೂಚನೆಯಂತೆ ತಾನು ಮರಳನ್ನು ಟಿಪ್ಪರಿಗೆ ಲೋಡ್ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ. ದಾಳಿ ನಡೆಸಿದ ಸ್ಥಳದಿಂದ ಅರ್ಧ ಕಿ.ಮೀ ದೂರ ಪಶ್ಚಿಮ ದಿಕ್ಕಿನಲ್ಲಿ ಸುಮಾರು 10 ಯುನಿಟ್ ಮರಳನ್ನು ದಾಸ್ತಾನಿರಿಸಿರುವುದು ಕಂಡು ಬಂದಿದೆ. ಇದನ್ನು ಟಿಪ್ಪರ್ ಚಾಲಕ/ಮಾಲಕ ಮುಹಮ್ಮದ್ ಅಯ್ಯೂಬ್ ಎಂಬಾತ ನದಿಯಿಂದ ಅಕ್ರಮವಾಗಿ ತೆಗೆದು ಲಾರಿಯಲ್ಲಿ ತುಂಬಿಸಿ ಸಾಗಿಸಲು ಸಿದ್ಧತೆ ನಡೆಸಿರುವುದು ಗಮನಕ್ಕೆ ಬಂದಿದೆ ಎಂದು ಕಂಕನಾಡಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ಎಸಿಪಿ ದಿನಕರ ಶೆಟ್ಟಿ ತಿಳಿಸಿದ್ದಾರೆ.