ಸಿರಿಯಾದ ಶಿಬಿರದಲ್ಲಿದ್ದ 40 ಮಕ್ಕಳು, 15 ಮಹಿಳೆಯರು ಫ್ರಾನ್ಸ್ ಗೆ ವಾಪಸು

ಪ್ಯಾರಿಸ್, ಅ.20: ಸಿರಿಯಾ(Syria)ದಲ್ಲಿ ಕುರ್ಡಿಷ್ ನೇತೃತ್ವದ ಶಿಬಿರದಲ್ಲಿದ್ದ 40 ಮಕ್ಕಳು ಹಾಗೂ 15 ಮಹಿಳೆಯರನ್ನು ಫ್ರಾನ್ಸ್(France) ವಾಪಾಸು ಕರೆಸಿಕೊಂಡಿದೆ ಎಂದು ಫ್ರಾನ್ಸ್ನ ವಿದೇಶಾಂಗ ಇಲಾಖೆ ಹೇಳಿದೆ.
ಫ್ರಾನ್ಸ್ಗೆ ಮರಳಿದವರಲ್ಲಿ 15 ಮಕ್ಕಳನ್ನು ಶಿಶು ರಕ್ಷಣಾ ಕೇಂದ್ರಕ್ಕೆ ಹಾಗೂ ಮಹಿಳೆಯರನ್ನು ನ್ಯಾಯಾಂಗ ಪ್ರಾಧಿಕಾರದ ವಶಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆ ಯಶಸ್ವಿಯಾಗಲು ಸಹಕರಿಸಿದ ಸ್ಥಳೀಯ ಅಧಿಕಾರಿಗಳನ್ನು ಫ್ರಾನ್ಸ್ ಅಭಿನಂದಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ. 2019ರಲ್ಲಿ ಸಿರಿಯಾದಲ್ಲಿ ಐಸಿಸ್ನ ಪತನದ ಬಳಿಕ, ಈ ಶಿಬಿರದಲ್ಲಿದ್ದ ತಮ್ಮ ನಾಗರಿಕರನ್ನು ಕೆಲವು ಪಾಶ್ಚಿಮಾತ್ಯ ದೇಶಗಳು ವಾಪಾಸು ಕರೆಸಿಕೊಂಡಿದ್ದವು.
ಆದರೆ ಈ ಶಿಬಿರದಲ್ಲಿದ್ದ ನೂರಾರು ಫ್ರೆಂಚ್ ಪ್ರಜೆಗಳನ್ನು ವಾಪಾಸು ಕರೆಸಿಕೊಳ್ಳಲು ಫ್ರಾನ್ಸ್ ಸರಕಾರ ನಿರಾಕರಿಸುತ್ತಿತ್ತು. ಈ ಬಗ್ಗೆ ಮಾನವ ಹಕ್ಕು ಸಂಘಟನೆಗಳು ವ್ಯಾಪಕ ಟೀಕೆಯ ಬಳಿಕ ನಿರ್ಧಾರ ಬದಲಿಸಿದ ಫ್ರಾನ್ಸ್ ಸರಕಾರ ಶಿಬಿರದಲ್ಲಿದ್ದ ಪ್ರಜೆಗಳನ್ನು ವಾಪಾಸು ಕರೆಸಿಕೊಳ್ಳುವುದಾಗಿ ಘೋಷಿಸಿದ್ದು, ಕಳೆದ ಜುಲೈಯಲ್ಲಿ ಪ್ರಥಮ ತಂಡ ತಾಯ್ನಾಡಿಗೆ ಹಿಂದಿರುಗಿದೆ.





