ಶಾಲೆಗಳ ಅಭಿವೃದ್ಧಿಗೆ ಪೋಷಕರಿಂದ ದೇಣಿಗೆ ಪಡೆಯಲು ಸೂಚನೆ
ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ. 20: ಶಾಲೆಯ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಸರಕಾರಿ ಶಾಲಾ ಮಕ್ಕಳ ಪೋಷಕರಿಂದ ದೇಣಿಗೆಯನ್ನು ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ.
ಯಾವುದೇ ಕಾರಣಕ್ಕೂ ಪೋಷಕರಿಂದ ಬಲವಂತಾಗಿ ಹಣವನ್ನು, ದೇಣಿಯನ್ನು ಸಂಗ್ರಹಿಸಬಾರದು. ಬದಲಾಗಿ, ಪೋಷಕರ ಮನವೊಳಿಸಿ ಶಾಲೆಯ ಅಗತ್ಯ ಖರ್ಚುವೆಚ್ಚಗಳನ್ನು ಮನವರಿಕೆ ಮಾಡಿಕೊಟ್ಟು ಪೋಷಕರು ಸ್ವಯಂ ಪ್ರೇರಿತವಾಗಿ ಎಸ್ಡಿಎಂಸಿ ಖಾತೆಗೆ ಹಣ ನೀಡುವಂತೆ ಮಾಡಬೇಕು ಎಂದು ತಿಳಿಸಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಪೋಷಕರ ಸಭೆಯನ್ನು ನಡೆಸಿ ಶಾಲೆಯಲ್ಲಿ ಅಗತ್ಯವಿರುವ ಚಟುವಟಿಕೆಗಳಿಗೆ ಅನುದಾನ ಹಾಗೂ ಪ್ರಗತಿಯ ಬಗ್ಗೆ ವಿವರಣೆಯನ್ನು ನೀಡಬೇಕು. ಇತರೆ ಆದ್ಯತೆ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ವಿವರಿಸಿ ನಡಾವಳಿ ದಾಖಲಿಸಬೇಕು. ಮುಂದಿನ ಸಭೆಯಲ್ಲಿ ನಡಾವಳಿಯನ್ನು ಓದಿ ತಿಳಿಸಿ ಅನುಪಾಲನೆ ಮಾಡಬೇಕು ಎಂದು ತಿಳಿಸಿದೆ.
ಈ ಹಿಂದೆ ರಾಜ್ಯ ಸರಕಾರವು ನನ್ನ ಶಾಲೆ ನನ್ನ ಕೊಡುಗೆ ಯೋಜನೆಯನ್ನು ಜಾರಿಗೊಳಿಸಿದ್ದು, ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಕೊಡುಗೆ ಮತ್ತು ದಾನ ರೂಪದಲ್ಲಿ ಆರ್ಥಿಕ ಸಹಾಯವನ್ನು ಪಡೆಯಲು ಅನುಮತಿ ನೀಡಲಾಗಿತ್ತು. ಈಗ ಪೋಷಕರಿಂದ ಮಾಸಿಕ ಸುಮಾರು 100 ರೂ.ಗಳ ಹಣವನ್ನು ಸಂಗ್ರಹಿಸಿ, ಎಸ್ಡಿಎಂಸಿ ಖಾತೆಗೆ ಸಂದಾಯ ಮಾಡಲು ಸೂಚಿಸಲಾಗಿದೆ. ಈ ರೀತಿಯಾಗಿ ಸಂದಾಯವಾದ ಹಣವನ್ನು ಆಧ್ಯತೆಯ ಮೇರೆಗೆ ಖರ್ಚು ಮಾಡಿ, ಪ್ರತ್ಯೇಕ ಲೆಕ್ಕಪತ್ರದಲ್ಲಿ ದಾಖಲಿಸಲು ತಿಳಿಸಿದೆ.