ಕೊಡಗು: ಮೂವರು ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ; ನಗದು, ಚಿನ್ನಾಭರಣ ಪತ್ತೆ
ಮಡಿಕೇರಿ ಅ.21 : ಕರ್ನಾಟಕ ಲೋಕಾಯುಕ್ತ ಮೈಸೂರು ವಿಭಾಗದ ಪೊಲೀಸ್ ಅಧಿಕಾರಿಗಳು ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಡಿ.ನಾಗರಾಜು ಅವರ ಮನೆಯಲ್ಲಿ 1,086 ಗ್ರಾಂ ಚಿನ್ನ, 9,928 ಗ್ರಾಂ. ಬೆಳ್ಳಿ, ನಗದು ಹಣ 23.91 ಲಕ್ಷ ರೂ., ಒಂದು ಕಿಯಾ ಕಾರು, ಒಂದು ಸೆಲಾರಿಯೋ ಕಾರು, ಒಂದು ಸ್ಕೂಟರ್ ಹಾಗೂ ದಾಖಲಾತಿಗಳು ಹಾಗೂ ಕುಟುಂಬ ಸದಸ್ಯರುಗಳ ಹೆಸರಿನಲ್ಲಿ ಬ್ಯಾಂಕಿನ 1 ಅಕೌಂಟ್ ನಲ್ಲಿ ಒಟ್ಟು 59.36 ಲಕ್ಷ ರೂ. ಪತ್ತೆಯಾಗಿದೆ.
ಸಣ್ಣ ನೀರಾವರಿ ಇಲಾಖೆಯ ಜೂನಿಯರ್ ಇಂಜಿನಿಯರ್ ಕುಶಾಲನಗರದ ನಿವಾಸಿ ರಫೀಕ್ ಅವರ ಬಳಿ ಬೈಚೇನಹಳ್ಳಿಯಲ್ಲಿ ಒಂದು ಮನೆ, 2 ಎಕರೆ ಕಾಫಿ ತೋಟ, 680 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, ನಗದು ಹಣ 2.82 ಲಕ್ಷ ರೂ., ಇನ್ನೋವಾ ಕಾರು, ಬೊಲೆರೋ ಜೀಪ್, ಒಂದು ಸ್ಕೂಟರ್, ಹಾಗೂ ದಾಖಲಾತಿಗಳು ಪತ್ತೆಯಾಗಿದೆ.
ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಆದೇಶದಲ್ಲಿರುವ ಈ ಹಿಂದೆ ಕುಶಾಲನಗರದ ವೃತ್ತ ನಿರೀಕ್ಷಕರಾಗಿದ್ದ ಮಹೇಶ್ ಎಂ. ಅವರ ಬಳಿ ಕುಶಾಲನಗರದ ಮಾದಪಟ್ಟಣದಲ್ಲಿ ಒಂದು ಮನೆ, 200 ಗ್ರಾಂ ಚಿನ್ನ, 2.5 ಕೆ.ಜಿ ಬೆಳ್ಳಿ, 5,500 ರೂ. ನಗದು ಹಾಗೂ ಕುಟುಂಬದ ಸದಸ್ಯರ ಹೆಸರುಗಳಲ್ಲಿ ಬ್ಯಾಂಕಿನ 4 ಅಕೌಂಟ್ಗಳಲ್ಲಿ ಒಟ್ಟು 4.99 ಲಕ್ಷ ರೂ. ನಗದು, ಒಂದು ಕಾರು, ಒಂದು ಸ್ಕೂಟರ್ ಹಾಗೂ ದಾಖಲಾತಿಗಳು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿತ ಸರ್ಕಾರಿ ಅಧಿಕಾರಿಗಳ ಹಾಗೂ ಕಚೇರಿಗಳ ಮೇಲಿನ ದಾಳಿ ಕಾರ್ಯಾಚರಣೆಯನ್ನು ಕರ್ನಾಟ ಲೋಕಾಯುಕ್ತದ ಅಪರ ಪೊಲೀಸ್ ಮಹಾನಿರ್ದೇಶಕರಾದ ಪ್ರಶಾಂತ್ ಕುಮಾರ್ ಠಾಕೂರ್ ಇವರ ಮಾರ್ಗದರ್ಶನದಲ್ಲಿ, ಮೈಸೂರು ಲೋಕಾಯುಕ್ತ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಎಸ್.ಸುರೇಶ್ ಬಾಬು ಅವರ ನೇತೃತ್ವದಲ್ಲಿ ಡಿ.ವೈ.ಎಸ್.ಪಿ ಗಳಾದ ಪವನಕುಮಾರ್, ಕೃಷ್ಣಯ್ಯ, ಮಾಲತೀಶ್, ಎಸ್.ಟಿ.ಓಡೆಯರ್ ಹಾಗೂ ಪೊಲೀಸ್ ನಿರೀಕ್ಷಕರುಗಳಾದ ಲೋಕೇಶ್, ಉಮೇಶ್, ಶಶಿಕಲಾ, ರವಿಕುಮಾರ್, ಶಶಿಕುಮಾರ್, ಪ್ರಕಾಶ್, ಜಯರತ್ನ, ರೂಪಶ್ರೀ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.