ಹಣ ಪಡೆದು ಜಮೀನು ಮಾರಾಟ ಮಾಡದೆ ವಂಚನೆ ಆರೋಪ: ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ದುಬೈನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಜಾಗ ನೀಡುವುದಾಗಿ ನಂಬಿಸಿ ಅವರಿಂದ 2.40 ಕೋ.ರೂ. ಪಡೆದು ಬಳಿಕ ಆ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿರುವ ಬಗ್ಗೆ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಕೇರಳದ ಪ್ರಸ್ತುತಃ ದುಬೈನಲ್ಲಿ ವಾಸವಾಗಿದ್ದ ಅಬ್ದುಲ್ಲಾ ಉದ್ಯಾವರ ಬೆಳ್ಳಿಕುಂಞಿ ವಂಚನೆಗೊಳಗಾದವರು. ಅಬ್ದುಲ್ಲಾ ನಗರದ ಫಳ್ನೀರ್‌ನಲ್ಲಿ ಫ್ಲ್ಯಾಟ್ ಹೊಂದಿದ್ದು, ಅದರಲ್ಲಿ ತನ್ನ ಸಂಬಂಧಿ ಮುಹಮ್ಮದ್ ಅಬ್ದುಲ್ ಮಜೀದ್ ಪಿ. ಎಂಬಾತನಿಗೆ ವಾಸಿಸಲು ಅವಕಾಶ ನೀಡಿದ್ದರು.
ಮುಹಮ್ಮದ್ ಅಬ್ದುಲ್ ಮಜೀದ್ ಕಾಸರಗೋಡು ಮತ್ತು ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಏಜಂಟ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ದುಬೈನಲ್ಲಿದ್ದ ಅಬ್ದುಲ್ಲಾ ಜಾಗ ಹುಡುಕುತ್ತಿರುವ ವಿಷಯ ತಿಳಿದ ಮುಹಮ್ಮದ್ ಅಬ್ದುಲ್ ಮಜೀದ್ ಕೇರಳದಲ್ಲಿ 1.01 ಎಕರೆ ಜಾಗವಿದ್ದು ಅದರ ಮಾಲಕ ದುಬೈನಲ್ಲಿದ್ದಾನೆಂದು ತನ್ನ ನಂಬಿಸಿದ ಎಂದು ಅಬ್ದುಲ್ಲಾ ಉದ್ಯಾವರ ದೂರಿನಲ್ಲಿ ತಿಳಿಸಿದ್ದಾರೆ.
ದುಬೈನಲ್ಲಿಯೇ ಇದ್ದ ಸಿ.ಮೊಯ್ದೀನ್ ಫರ್ಹಾದ್ ಚುಂಗೆ ಎಂಬಾತನನ್ನು ಅಬ್ದುಲ್ಲಾ ಉದ್ಯಾವರ ಅವರ ಬಳಿಗೆ ಕಳುಹಿಸಿ ಜಾಗದ ಜೆರಾಕ್ಸ್ ದಾಖಲೆಗಳನ್ನು ತೋರಿಸಿ ನಂಬಿಸಿದ್ದ. ಜಾಗ ಮಾರಾಟಕ್ಕೆ 2,84,82,000 ರೂ.ಗಳಿಗೆ ಮಾತುಕತೆಯಾಗಿತ್ತು. ಬಳಿಕ ಅಬ್ದುಲ್ಲಾ ದುಬೈಯಿಂದ ಹಣ ಪಾವತಿ ಮಾಡಿದ್ದರು. ಹಾಗೇ ಅಬ್ದುಲ್ಲಾ ದುಬೈಯಿಂದ ಫಳ್ನೀರ್‌ಗೆ ಆಗಮಿಸಿ ಆರೋಪಿಗಳಿಗೆ 2,16,96,470 ರೂ. ಪಾವತಿಸಿದ್ದರು. ಆದರೆ ಆರೋಪಿಗಳು ಜಾಗದ ನೋಂದಣಿ ಮಾಡಿಕೊಡಲಿಲ್ಲ. ಈ ಬಗ್ಗೆ ಕೇಳಿದಾಗ ಹಣವನ್ನು ಕೂಡ ವಾಪಸ್ ನೀಡದೆ ಬೆದರಿಸಿದ್ದಾರೆ. ಅಲ್ಲದೆ ಅಬ್ದುಲ್ಲಾರಿಗೆ ಮಾರಾಟ ಮಾಡುವುದಾಗಿ ಹೇಳಿದ ಜಾಗವನ್ನು ಮುಹಮ್ಮದ್ ಶರೀಫ್ ಮತ್ತು ಫಾರೂಕ್ ಹುಸೇನ್ ಎಂಬವರಿಗೆ ಮಾರಾಟ ಮಾಡಿದ್ದಾರೆ. ಒಟ್ಟಿನಲ್ಲಿ ಆರೋಪಿಗಳು 2.40 ಕೋ.ರೂ. ವಂಚಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.







