ಯುನಿವೆಫ್‌ನ ‘ಪ್ರವಾದಿ ಅಭಿಯಾನ’ ಕಾರ್ಯಕ್ರಮ ಉದ್ಘಾಟನೆ
ಮಂಗಳೂರು, ಅ.21: ಪ್ರವಾದಿ ಮುಹಮ್ಮದ್(ಸ)ರವರ ಜನ್ಮ ಮಾಸಾಚರಣೆಯ ಪ್ರಯುಕ್ತ ಯುನಿವೆಫ್ ಕರ್ನಾಟಕದ ವತಿಯಿಂದ ‘ಮಾನವ ಸಮಾಜ, ಸಂಸ್ಕೃತಿ ಮತ್ತು ಪ್ರವಾದಿ (ಸ)ರ ಬೋಧನೆಗಳು’ ಎಂಬ ಕೇಂದ್ರೀಯ ವಿಷಯದಲ್ಲಿ ಡಿ.30ರವರೆಗೆ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಎಂಬ ಪ್ರವಾದಿ ಸಂದೇಶ ಪ್ರಚಾರದ ಅಭಿಯಾನದ ಉದ್ಘಾಟನೆಯು ಶುಕ್ರವಾರ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣಲ್ಲಿ ನಡೆಯಿತು.
ಅಭಿಯಾನ ಉದ್ಘಾಟಿಸಿ ಕೇಂದ್ರೀಯ ವಿಷಯದಲ್ಲಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಸ್ಲಿಮ್ ದ್ವೇಷವನ್ನು ಬಿತ್ತಿ ಧರ್ಮಗಳ ಮಧ್ಯೆ ಕಂದರ ಸೃಷ್ಟಿಸಿ ಆ ಮೂಲಕ ಅಸಹಿಷ್ಣುತೆ ವ್ಯಕ್ತಪಡಿಸುವ, ಮಾನವೀಯತೆಯ, ಶಾಂತಿ-ಸೌಹಾರ್ದತೆಯ ಇಸ್ಲಾಂ ಧರ್ಮವನ್ನು ಭಯೋತ್ಪಾದನೆಯ ಧರ್ಮವೆಂದು ಬಿಂಬಿಸುವ ಈ ಸಂದರ್ಭದಲ್ಲಿ ಇಸ್ಲಾಮಿನ ನೈಜ ಆಶಯಗಳನ್ನು, ಪ್ರವಾದಿಯ ಮಾನವೀಯ ಸಂದೇಶಗಳನ್ನು ವ್ಯಾಪಕಗೊಳಿಸಬೇಕಾದ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಮಂಗಳೂರು ಶಾಖೆಯ ಅಧ್ಯಕ್ಷ ತಾಯಿಫ್ ಅಹ್ಮದ್ ಮತ್ತು ಹಿರಿಯ ಸದಸ್ಯ ಅಬೂಬಕರ್ ಉಪಸ್ಥಿತರಿದ್ದರು.
ಮುಹಮ್ಮದ್ ಅರೀಝ್ ಕಿರಾಅತ್ ಪಠಿಸಿದರು. ಅಭಿಯಾನ ಸಂಚಾಲಕ ಅಬ್ದುಲ್ಲಾ ಪಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ ಉಬೈದುಲ್ಲಾ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ಕಾರ್ಯಕ್ರಮದ ಪ್ರಚಾರದ ಅಂಗವಾಗಿ ಶುಕ್ರವಾರ ಸಂಜೆ ನಗರದ ಫಳ್ನೀರ್ ಲುಲು ಸೆಂಟರ್‌ನಿಂದ ಕಂಕನಾಡಿಯ ಜಮೀಅತುಲ್ ಫಲಾಹ್ ಸಭಾಂಗಣದವರೆಗೆ ನಡೆದ ಕಾಲ್ನಡಿಗೆ ಜಾಥಾದ ನೇತೃತ್ವವನ್ನು ಕಾರ್ಯದರ್ಶಿಗಳಾದ ಯು.ಕೆ.ಖಾಲಿದ್ ಉಳ್ಳಾಲ ಮತ್ತು ಸೈಫುದ್ದೀನ್ ಕುದ್ರೋಳಿ ವಹಿಸಿದ್ದರು.