ಗುವಾಮ್ ದ್ವೀಪಕ್ಕೆ ಆಗಮಿಸಿದ ಅಮೆರಿಕದ ಬಾಂಬ್ ವಿಮಾನಗಳು

ವಾಷಿಂಗ್ಟನ್, ಅ.21: ಉತ್ತರ ಕೊರಿಯಾ(North Korea) ಪರಮಾಣು ಅಸ್ತ್ರದ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ ಎಂಬ ವರದಿಯ ಮಧ್ಯೆ ಅಮೆರಿಕ ವಾಯುಪಡೆ(US Air Force)ಯ ಬಿ-1ಬಿ ಬಾಂಬ್ ವಿಮಾನ(B-1B Bomber)ಗಳು ಪಶ್ಚಿಮ ಪೆಸಿಫಿಕ್ನ ಗುವಾಮ್ ದ್ವೀಪದಲ್ಲಿ ಬಂದಿಳಿದಿದೆ ಎಂದು ವರದಿಯಾಗಿದೆ.
ಗುವಾಮ್ ದ್ವೀಪ ಅಮೆರಿಕದ ನಿಯಂತ್ರಣದ ದ್ವೀಪವಾಗಿದ್ದು ಇಲ್ಲಿ ಅಮೆರಿಕ ತಾತ್ಕಾಲಿಕ ಸೇನಾ ನೆಲೆಯನ್ನು ಅಭಿವೃದ್ಧಿಗೊಳಿಸಿದೆ. ಗುವಾಮ್ನಲ್ಲಿ ಬಿ-1ಬಿ ಬಾಂಬರ್ ವಿಮಾನಗಳ ನಿಯೋಜನೆಯನ್ನು ಅಮೆರಿಕದ ಸೇನೆ ದೃಢಪಡಿಸಿದೆ. ಇದು ಸಂಭಾವ್ಯ ಪ್ರಚೋದನೆಯನ್ನು ತಡೆಯಲು ಅಮೆರಿಕ ತನ್ನ ಮಿತ್ರರು ಹಾಗೂ ಪಾಲುದಾರರೊಂದಿಗೆ ನಿಕಟವಾಗಿ ನಿಂತಿದೆ ಎಂಬ ಸಂದೇಶವಾಗಿದೆ ಎಂದು ಪೆಂಟಗಾನ್ ವಕ್ತಾರ ಬ್ರಿಗೇಡಿಯರ್ ಜನರಲ್ ಪ್ಯಾಟ್ ರೈಡರ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ತೈವಾನ್ ಜಲಸಂಧಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲೂ ಈ ನಿಯೋಜನೆ ಮಹತ್ವದ್ದಾಗಿದೆ. ಬಾಂಬರ್ಗಳ ಉಪಸ್ಥಿತಿಯು ಅಮೆರಿಕ ಯಾವುದೇ ಸಮಯದಲ್ಲಿ ಜಾಗತಿಕ ಕಾರ್ಯಾಚರಣೆಗಳನ್ನು ನಡೆಸುವ ಸಾಮಥ್ರ್ಯ ಹೊಂದಿದೆ ಎಂಬುದನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಎಂದವರು ಹೇಳಿದ್ದಾರೆ.
ಗುವಾಮ್ನಲ್ಲಿ ತಾತ್ಕಾಲಿಕ ನಿಯೋಜನೆ ಸಂದರ್ಭ ಬಾಂಬರ್ ವಿಮಾನಗಳು ಇಂಡೊ-ಪೆಸಿಫಿಕ್ನಲ್ಲಿ ಅನಿರ್ದಿಷ್ಟ ಮಿತ್ರಪಡೆಗಳೊಂದಿಗೆ ಹಲವಾರು ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳಲಿದೆ. ಬಿ-1ಬಿ ಈ ಪ್ರದೇಶದಲ್ಲಿ ವಿಶೇಷವಾಗಿ ಸಮರ್ಥ ವೇದಿಕೆಯಾಗಿದ್ದು ನಿಖರ ಗುರಿ ಹಾಗೂ ಯುದ್ಧಸಾಮಾಗ್ರಿಗಳೊಂದಿಗೆ ಅಧಿಕ ದೂರವನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಬಾಂಬರ್ ಕಾರ್ಯಾಚರಣೆ ಸಂಭಾವ್ಯ ಎದುರಾಳಿಗಳನ್ನು ತಡೆಯುವಲ್ಲಿ ಮತ್ತು ಅವರ ನಿರ್ಧಾರದ ಲೆಕ್ಕಾಚಾರಕ್ಕೆ ಸವಾಲು ಹಾಕಲು ನೆರವಾಗಲಿದೆ ಎಂದು 37ನೇ ಬಾಂಬ್ ತುಕಡಿಯ ಲೆಫ್ಟಿನೆಂಟ್ ಕರ್ನಲ್ ಡೇನಿಯಲ್ ಮೌಂಟ್ ಹೇಳಿದ್ದಾರೆ.







