ಕೆನಡಾ: ಮಕ್ಕಳ ಹತ್ಯೆ ಪ್ರಕರಣದಲ್ಲಿ ಸಿಖ್ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣ ದಾಖಲು
ಟೊರಂಟೊ, ಅ.21: ಕೆನಡಾ(Canada)ದಲ್ಲಿ ಭಾರತೀಯ ಮೂಲದ ಸಿಖ್ ಕುಟುಂಬ(Sikh family)ದ ಮನೆಯಲ್ಲಿ ಇಬ್ಬರು ಮಕ್ಕಳು ಕೊಲೆಯಾದ ಪ್ರಕರಣದಲ್ಲಿ ಆ ಮಕ್ಕಳ ತಂದೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.
ಕಮಲಜಿತ್ ಅರೋರಾ ಎಂಬಾತ ಅಕ್ಟೋಬರ್ 17ರಂದು ತನ್ನ 11 ವರ್ಷದ ಪುತ್ರ ಹಾಗೂ 13 ವರ್ಷದ ಪುತ್ರಿಯನ್ನು ಮನೆಯಲ್ಲಿ ಹತ್ಯೆ ಮಾಡಿದ ಆರೋಪಿಯಾಗಿದ್ದು ಈತನ ವಿರುದ್ಧ `ಕೊಲೆಯ ಎರಡು ಕೌಂಟ್ ಅಪರಾಧ'ದ ಪ್ರಕರಣ ದಾಖಲಾಗಿದೆ ಎಂದು ಸಿಟಿವಿ ನ್ಯೂಸ್ (CTV News)ವರದಿ ಮಾಡಿದೆ.
ಜತೆಗೆ, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದೇಹದಲ್ಲಿ ಗಾಯ ಉಂಟು ಮಾಡಿದ್ದಕ್ಕೆ `ಒಂದು ಕೌಂಟ್ ಹಲ್ಲೆ ಅಪರಾಧ' ಪ್ರಕರಣವೂ ಈತನ ವಿರುದ್ಧ ದಾಖಲಾಗಿದೆ. ಇದು ಕೌಟುಂಬಿಕ ಹಿಂಸೆಯ ಪ್ರಕರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅರೋರಾ ಮಾಂಟ್ರಿಯಲ್ನ ಬಳಿಯ ಲವಾಲ್'ಸ್ ಸ್ಟೆಡೊರೊಥಿ ಸೆಕ್ಟರ್ನ ನಿವಾಸಿಯಾಗಿದ್ದಾನೆ. ಮನೆಯಲ್ಲಿ ನಡೆದ ಅನಾಹುತದ ಬಗ್ಗೆ ಮೃತ ಮಕ್ಕಳ ಸಹೋದರಿ ಮಾಹಿತಿ ನೀಡಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ನೆರೆಮನೆಯ ನಿವಾಸಿ ಆ್ಯನೀ ಚಾರ್ಪೆಂಟಿಯರ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.





