ಅರುಣಾಚಲಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ನಾಲ್ವರು ಸಿಬ್ಬಂದಿಯ ಮೃತದೇಹ ಪತ್ತೆ

Photo: PTI
ಇಟಾನಗರ್, ಅ. 21: ಭಾರತೀಯ ಸೇನಾ ಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ (HAL) ಅರುಣಾಚಲಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯ ಟ್ಯುಟಿಂಗ್ನ ದಕ್ಷಿಣದಲ್ಲಿರುವ ಮಿಗ್ಗಿಂಗ್ನಲ್ಲಿ ಶುಕ್ರವಾರ ಪತನಗೊಂಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್ನಲ್ಲಿ ಇದ್ದ ಐವರು ಪ್ರಯಾಣಿಕರಲ್ಲಿ ಇದುವರೆಗೆ ನಾಲ್ವರ ಮೃತದೇಹಗಳನ್ನು ರಕ್ಷಣಾ ತಂಡ ಪತ್ತೆ ಮಾಡಿದೆ ಎಂದು ಅದು ಹೇಳಿದೆ.
ಕೆಳಗಿನ ಸಿಯಾಂಗ್ ಜಿಲ್ಲೆಯ ಲಿಕಾಬಲಿಯಿಂದ ಹಾರಾಟ ಆರಂಭಿಸಿರುವ ಸೇನಾ ಪಡೆಯ ಎಎಲ್ಎಚ್ ಡಬ್ಲ್ಯುಎಸ್ಐ ಹೆಲಿಕಾಪ್ಟರ್ ಅರುಣಾಚಲಪ್ರದೇಶದ ಟ್ಯುಟಿಂಗ್ನ ದಕ್ಷಿಣದ ಮಿಗ್ಗಿಂಗ್ನಲ್ಲಿ ಪತನಗೊಂಡಿದೆ ಎಂದು ತೇಜ್ಪುರ ನೆಲೆಯ ರಕ್ಷಣಾ ಪಿಆರ್ಒ ಲೆಫ್ಟಿನೆಂಟ್ ಕರ್ನಲ್ ಎ.ಎಸ್. ವಾಲಿಯಾ ಅವರು ತಿಳಿಸಿದ್ದಾರೆ.
ಕೂಡಲೇ ಸೇನಾ ಪಡೆ ಹಾಗೂ ವಾಯು ಪಡೆ ಜಂಟಿಯಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಹೆಲಿಕಾಪ್ಟರ್ನಲ್ಲಿದ್ದ ಒಟ್ಟು 5 ಮಂದಿ ಸಿಬ್ಬಂದಿಯಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.





